• Home  
  • ವೇದಾಧಿಕಾರ ಮತ್ತು ಮೋಕ್ಷಾಧಿಕಾರ
- Articles - ದಾರಿ ತಪ್ಪಿದ ಸಂಸ್ಕೃತಿ ಚಿಂತನೆ

ವೇದಾಧಿಕಾರ ಮತ್ತು ಮೋಕ್ಷಾಧಿಕಾರ

ಭಾರತೀಯ ಇತಿಹಾಸವನ್ನು ಓದಿದ ಎಲ್ಲರಿಗೂ ಹಿಂದೂ ಪರಂಪರೆಯ ಕುರಿತು ಬಂದೇ ಬರಬಹುದಾದ ಒಂದು ಸಾಮಾನ್ಯ ಜ್ಞಾನ ಈ ಮುಂದಿನಂತಿರುತ್ತದೆ: ವೇದಗಳನ್ನು ನಿಷೇಧಿಸುವ ಮೂಲಕ ಶೂದ್ರರಿಗೆ ಹಿಂದೂಗಳ ಪವಿತ್ರಗ್ರಂಥವನ್ನು ಹಾಗೂ ಆ ಮೂಲಕ ಜ್ಞಾನವನ್ನು ನಿರಾಕರಿಸಲಾಯಿತು. ಹೀಗೆ ಜ್ಞಾನದಿಂದ ವಂಚಿತರಾದವರು ಶೂದ್ರರು ಹಾಗೂ ಕೆಳಜಾತಿಗಳಾದರು, ಪವಿತ್ರ ಗ್ರಂಥವನ್ನು ಓದಲು ಹಕ್ಕನ್ನು ಹೊಂದಿದ ಬ್ರಾಹ್ಮಣರು ಎಲ್ಲಾ ಜಾತಿಗಳನ್ನೂ ನಿಯಂತ್ರಿಸುವ ಸ್ಥಾನವನ್ನು ಪಡೆದರು. ಇದರ ಜೊತೆಗೇ ಮನುಸ್ಮೃತಿಯ ಒಂದೆರಡು ಸಾಲುಗಳನ್ನು ದೃಷ್ಟಾಂತಕ್ಕಾಗಿ ಕೊಟ್ಟರಂತೂ ಸಾಕ್ಷ್ಯಾಧಾರಗಳೂ ಸಿಕ್ಕಂತಾಗಿ ಈ ವಿಷಯವು ಮನದಟ್ಟಾಗಿ ಬಿಡುತ್ತದೆ. […]

ಭಾರತೀಯ ಇತಿಹಾಸವನ್ನು ಓದಿದ ಎಲ್ಲರಿಗೂ ಹಿಂದೂ ಪರಂಪರೆಯ ಕುರಿತು ಬಂದೇ ಬರಬಹುದಾದ ಒಂದು ಸಾಮಾನ್ಯ ಜ್ಞಾನ ಈ ಮುಂದಿನಂತಿರುತ್ತದೆ: ವೇದಗಳನ್ನು ನಿಷೇಧಿಸುವ ಮೂಲಕ ಶೂದ್ರರಿಗೆ ಹಿಂದೂಗಳ ಪವಿತ್ರಗ್ರಂಥವನ್ನು ಹಾಗೂ ಆ ಮೂಲಕ ಜ್ಞಾನವನ್ನು ನಿರಾಕರಿಸಲಾಯಿತು. ಹೀಗೆ ಜ್ಞಾನದಿಂದ ವಂಚಿತರಾದವರು ಶೂದ್ರರು ಹಾಗೂ ಕೆಳಜಾತಿಗಳಾದರು, ಪವಿತ್ರ ಗ್ರಂಥವನ್ನು ಓದಲು ಹಕ್ಕನ್ನು ಹೊಂದಿದ ಬ್ರಾಹ್ಮಣರು ಎಲ್ಲಾ ಜಾತಿಗಳನ್ನೂ ನಿಯಂತ್ರಿಸುವ ಸ್ಥಾನವನ್ನು ಪಡೆದರು. ಇದರ ಜೊತೆಗೇ ಮನುಸ್ಮೃತಿಯ ಒಂದೆರಡು ಸಾಲುಗಳನ್ನು ದೃಷ್ಟಾಂತಕ್ಕಾಗಿ ಕೊಟ್ಟರಂತೂ ಸಾಕ್ಷ್ಯಾಧಾರಗಳೂ ಸಿಕ್ಕಂತಾಗಿ ಈ ವಿಷಯವು ಮನದಟ್ಟಾಗಿ ಬಿಡುತ್ತದೆ. ಅದಕ್ಕೆ ಇಂದಿನ ಸಾಂಪ್ರದಾಯಿಕ ಸಮಾಜವೇ ದೃಷ್ಟಾಂತ. ಯಾವ ಶೂದ್ರರಿಗೂ ವೇದಗಳನ್ನು ಪಾರಂಪರಿಕವಾಗಿ ಕಲಿಸುವ ವ್ಯವಸ್ಥೆ ಅದರಲ್ಲಿ ಇಲ್ಲ. ಅವನ್ಯಾರೂ ಸಾಂಪ್ರದಾಯಿಕವಾಗಿ ಸಂಸ್ಕೃತವನ್ನೂ ಕಲಿಯುವುದಿಲ್ಲ, ಅಷ್ಟೇ ಅಲ್ಲ ಹಾಗೆ ಕಲಿಯಲಿಕ್ಕೆ ಹೋದವರ ಕುರಿತು ಟೀಕೆಗಳು, ವಿರೋಧಗಳು ಬಂದ ಉದಾಹರಣೆಗಳೂ ಇವೆ.

ಇಷ್ಟಾದರೂ ಕೂಡ ಒಂದು ವಿಷಯ ನಮಗ್ಯಾರಿಗೂ ಸ್ಪಷ್ಟವಾಗುವುದಿಲ್ಲ. ವೇದವನ್ನು ಓದಲು ಕೊಡದಿದ್ದರೆ ಶೂದ್ರರೇಕೆ ಸಾಮಾಜಿಕ ಸ್ಥಾನಮಾನವನ್ನು ಕಳೆದುಕೊಳ್ಳಬೇಕು? ಹೀನ ಸ್ಥಿತಿಗೆ ಇಳಿಯಬೇಕು? ಬ್ರಾಹ್ಮಣರಿಗೆ ವೇದಗಳನ್ನು ಓದಿದ ಮಾತ್ರದಿಂದಲೇ ಓದದವರ ಮೇಲೆ ನಿಯಂತ್ರಣವು ಹೇಗೆ ಬಂದುಬಿಡುತ್ತದೆ? ಇದಕ್ಕೆ ಉತ್ತರವಾಗಿ ಬ್ರಾಹ್ಮಣರೊಂದೇ ಜ್ಞಾನವನ್ನು ಹೊಂದಿದರು ಹಾಗೂ ಉಳಿದ ಅಜ್ಞಾನಿಗಳು ಅವರು ಹೇಳಿದಂತೇ ಕೇಳಿ ದಾಸ್ಯಕ್ಕೆ ಹಾಗೂ ಮೌಡ್ಯಕ್ಕೆ ಒಳಗಾದರು ಎನ್ನಲಾಗುತ್ತದೆ. ಆದರೆ ಈ ಉತ್ತರವು ನಮ್ಮ ಅನುಭವಕ್ಕೆ ಸರಿಯೆನಿಸುವುದಿಲ್ಲ. ನಮ್ಮಲ್ಲಿ ಬಹಳ ಓದಿಕೊಂಡ ವಿದ್ವಾಂಸರಿಗೆ ಆ ಕಾರಣದಿಂದಲೇ ಉಳಿದವರ ಮೇಲೆ ನಿಯಂತ್ರಣ ಬಂದಿರುವುದನ್ನು ನಾವು ನೋಡಲಾರೆವು. ಅರ್ಧಂಬರ್ಧ ಓದಿಕೊಂಡು, ಅಥವಾ ಏನನ್ನೂ ಓದದೆಯೂ ಕೇವಲ ಹಣಮಾಡುವ ಹಾಗೂ ವಶೀಲಿಬಾಜಿಯ ಕಲೆಯನ್ನು ಕಲಿತವರು, ರಾಜಕೀಯ ಪ್ರಭಾವವನ್ನು ಗಳಿಸಿದವರು ಇಂದು ಶಿಕ್ಷಣ ಕ್ಷೇತ್ರದಿಂದ ಹಿಡಿದು ಎಲ್ಲೆಡೆಯೂ ಪ್ರಭಾವಿಗಳಾಗಿ ಮಿಂಚುತ್ತಿದ್ದಾರೆ. ಸಾಮಾಜಿಕವಾಗಿ ಕೂಡ ಅಂಥವರ ಸ್ಥಾನಮಾನಗಳು ವಿದ್ವಾಂಸರ ಸ್ಥಾನಮಾನಕ್ಕಿಂತ ಕಡಿಮೆ ಅಂತೂ ಇಲ್ಲ, ಬದಲಾಗಿ ಜನರು ಅವರಿಗೆ ಹೆದರುತ್ತಾರೆ ಹಾಗೂ ಗೌರವ ಕೊಡುತ್ತಾರೆ.

ಹಾಗಾಗಿ ಜ್ಞಾನಿಗಳಾಗಿ ಬಿಟ್ಟರೆ ಉಳಿದವರನ್ನು ನಿಯಂತ್ರಿಸಿಬಿಡುತ್ತಾರೆ ಎಂಬುದು ನಮ್ಮ ಅನುಭವದಿಂದ ಪ್ರಮಾಣಿತವಾದ ವಿಷವಂತೂ ಅಲ್ಲ. ಈ ಕಥೆಯನ್ನು ಹುಟ್ಟುಹಾಕಿದವರು ಪಾಶ್ಚಾತ್ಯರು. ಅದು ಅವರ ಅನುಭವ ದೇವವಾಣಿಯಾದ ಪವಿತ್ರಗ್ರಂಥವನ್ನು ಆಧರಿಸಿಯೇ ಕ್ಯಾಥೋಲಿಕ್ ಚರ್ಚು ಎಂಬ ವ್ಯವಸ್ಥೆ ಯುರೋಪಿನಲ್ಲಿ ಬೆಳೆಯಿತು. ಅದು ಬೆಳೆಯುತ್ತಾ ಯುರೋಪಿನ ಎಲ್ಲಾ ಪ್ರಾದೇಶಿಕ ಸಂಪ್ರದಾಯಗಳನ್ನೂ ಒರೆಸಿ ಹಾಕಿ ಏಕರೂಪೀ ಕ್ರೈಸ್ತ ಸಮಾಜವೊಂದನ್ನು ನಿರ್ಮಿಸಿತು. ಈ ಸಮಾಜಕ್ಕೆ ಕ್ರೈಸ್ತರ ಪವಿತ್ರಗ್ರಂಥವೇ ಪ್ರಮಾಣ. ಈ ಚರ್ಚಿನ ಅಧಿಕಾರಿಗಳು ಪವಿತ್ರ ಗ್ರಂಥವನ್ನು ತಿಳಿದವರಾದ್ದರಿಂದ ಸಮಸ್ತ ಕ್ರೈಸ್ತ ಸಮಾಜವನ್ನೂ ನಿಯಂತ್ರಿಸುವ ಶಕ್ತಿಯನ್ನು ಹೊಂದಿದ್ದರು. ಅವರು ಸಾಮಾನ್ಯ ಕ್ರೈಸ್ತರಿಗಿಂತ ಶ್ರೇಷ್ಠರಾಗಿದ್ದು ಹೀಗೆ. ಪಾಶ್ಚಾತ್ಯರು ಈ ಕಥೆಯನ್ನು ಭಾರತಕ್ಕೆ ಕೂಡ ಅನ್ವಯಿಸಿದರು. ಆದರೆ ಭಾರತದಲ್ಲಿ ಏಕರೂಪೀ ಹಿಂದೂ ಸಮಾಜವಾಗಲೀ, ಅದನ್ನು ನಿಯಂತ್ರಿಸುವ ಚರ್ಚಾಗಲೀ, ಇವರಿಗೆಲ್ಲ ಆಧಾರವಾಗಿ ಒಂದು ಪವಿತ್ರ ಗ್ರಂಥವಾಗಲೀ ಇರಲಿಲ್ಲ. ಹಾಗಾಗಿ ಇಲ್ಲಿ ಪುರೋಹಿತರ ಆಳ್ವಿಕೆ ಇರುವುದೂ ಸಾಧ್ಯವಿಲ್ಲ. ಅಂದರೆ ಹಿಂದೂ ಸಂಸ್ಕೃತಿಯು ಕ್ಯಾಥೋಲಿಕ್ ರಿಲಿಜನ್ನಲ್ಲ. ಹಾಗಾಗಿ ಪವಿತ್ರಗ್ರಂಥವನ್ನು ತಿಳಿದುಕೊಂಡವರು ಉಳಿದವರನ್ನು ಹೇಗೆ ನಿಯಂತ್ರಿಸುತ್ತಾರೆನ್ನುವುದು ನಮಗೆ ಅರ್ಥವಾಗುವ ಸಂಭವ ಇಲ್ಲ.

ಇದರ ಜೊತೆಗೆ ಮತ್ತೊಂದು ಕಥೆಯನ್ನು ನಾವು ಕೇಳುತ್ತಿರುತ್ತೇವೆ. ಅದೆಂದರೆ ಬ್ರಾಹ್ಮಣ ಪುರೋಹಿತರು ಶೂದ್ರರು ಪವಿತ್ರಗ್ರಂಥವನ್ನು ಓದದಂತೆ ಮಾಡಿ ಅವರಿಗೆ ಮೋಕ್ಷವನ್ನು ನಿರಾಕರಿಸಿದರು ಎಂಬುದು. ಆ ಕಾರಣಕ್ಕಾಗಿಯೇ ಬೌದ್ಧ, ಜೈನ, ವೀರಶೈವ ಇತ್ಯಾದಿ ಹೊಸ ಮಾರ್ಗಗಳು ಪ್ರತಿಭಟನೆಯಾಗಿ ಹುಟ್ಟಿಕೊಂಡವು ಎಂಬುದು ನಮ್ಮ ಪಠ್ಯ ಪುಸ್ತಕಗಳ ಕಥೆ. ಯಾವುದೋ ಒಂದು ಗ್ರಂಥ, ಅದು ಎಷ್ಟೇ ಪವಿತ್ರವಾಗಿರಲಿ ಅದನ್ನು ಓದದಿದ್ದರೆ ಮೋಕ್ಷವೇ ಇಲ್ಲ ಎಂಬುದಾಗಿ ನಮ್ಮ ಪರಂಪರೆ ಎಲ್ಲಾದರೂ ಹೇಳಿದೆಯೆ? ವೇದದ ಕುರಿತು ನಮ್ಮ ಗ್ರಂಥಗಳು ಹೇಳುವುದೇನು? ವೇದಗಳು ವೃಕ್ಷಶಾಖೆಗಳಂತೆ ಹಾಗೂ ಪರಮಾತ್ಮನು ಪ್ರತಿಪದೆಯ ಚಂದ್ರನಂತೆ. ಆಕಾಶದಲ್ಲಿ ಪ್ರತಿಪದೆಯ ಚಂದ್ರನನ್ನು ಗುರುತಿಸುವುದೇ ಅಸಾಧ್ಯ ಗುರುತಿಸಿದವರು ಉಳಿದವರಿಗೆ ತೋರಿಸುವುದೂ ಅಸಾಧ್ಯ. ಅಂಥ ಸಂದರ್ಭದಲ್ಲಿ ಒಂದು ಮರದ ಎರಡು ಕೊಂಬೆಗಳ ನಡುವೆ ದಿಟ್ಟಿಸಿ ನೋಡಿದರೆ ಚಂದ್ರನನ್ನು ನಾವೂ ನೋಡಬಹುದು. ಉಳಿದವರಿಗೂ ತೋರಿಸಬಹುದು. ಒಂದು ವೇಳೆ ನೋಡುವವನು ಚಂದ್ರನನ್ನು ಬಿಟ್ಟು ಕೊಂಬೆಗಳನ್ನೇ ನೋಡುತ್ತಿದ್ದರೆ ಅವನಿಗೆ ಮರ ಮಾತ್ರ ಕಾಣಿಸುತ್ತದೆ. ಅವನಿಗೆ ಚಂದ್ರನು ಕಾಣಿಸಲಿಕ್ಕೆ ಸಾಧ್ಯವೇ ಇಲ್ಲ. ಅಂದರೆ ವೇದಗಳನ್ನು ಎಷ್ಟೇ ಕಲಿತರೂ ಪರಮಾತ್ಮನನ್ನು ಹುಡುಕದಿದ್ದರೆ ಅವನು ಕಾಣಲಿಕ್ಕೆ ಸಾಧ್ಯವೇ ಇಲ್ಲ ಎಂದು ದೃಷ್ಟಾಂತಪೂರ್ವಕವಾಗಿ ನಮಗೆ ತಿಳಿಸಿಕೊಡಲಾಗುತ್ತದೆ.

ಹಾಗೆಯೇ ವೇದಗಳಿಲ್ಲದೆಯೂ ಪರಮಾತ್ಮ ಜ್ಞಾನ ಆಗುತ್ತದೆ ಎಂದೂ ನಮ್ಮ ಪರಂಪರೆ ತಿಳಿಸುತ್ತದೆ. ಮೋಕ್ಷ ಎನ್ನುವುದು ಎಲ್ಲಾ ಜಾತಿಯ, ವರ್ಗದ ಹಾಗೂ ಲಿಂಗದ ಜನರಿಗೂ ಸಾಧ್ಯವಿದೆ ಎಂದೇ ನಮ್ಮ ಗ್ರಂಥಗಳು ತಿಳಿಸುತ್ತವೆ. ಅಂದರೆ ಮೋಕ್ಷಕ್ಕೆ ವೇದಗಳು ಅನಿವಾರ್ಯವಲ್ಲ. ನಮ್ಮ ಋಷಿಗಳು ಆತ್ಮಜ್ಞಾನವನ್ನೇ ನಿಜವಾದ ಜ್ಞಾನ ಎಂದು ಪ್ರತಿಪಾದಿಸಿದ್ದಾರೆ. ವಿದ್ವಾಂಸರ ವಾಗೈಖರಿ, ಶಬ್ದಝರಿ, ಶಾಸ್ತ್ರ ವ್ಯಾಖ್ಯಾನ ಕೌಶಲಗಳು ಹೊಟ್ಟೆಪಾಡಿಗಾಗಿಯೇ ವಿನಃ ಮುಕ್ತಿಗಲ್ಲ ಎಂದು ಶಂಕರರೇ ಹೇಳಿದ್ದಾರೆ. ಅಂದರೆ ಜ್ಞಾನಕ್ಕೂ ವಿದ್ವತ್ತಿಗೂ ಅಂಥ ಸಂಬಂಧವನ್ನೇ ಕಲ್ಪಿಸದ ಪರಂಪರೆ ನಮ್ಮದು. ಅಂಥ ಪರಂಪರೆಯು ವೇದವನ್ನೋದಿದರೆ ಮಾತ್ರ ಜ್ಞಾನ ಹಾಗೂ ಮುಕ್ತಿ ಸಿಗುತ್ತವೆ ಎಂದು ಪ್ರತಿಪಾದಿಸಲು ಸಾಧ್ಯವೇ ಇಲ್ಲ. ಯಾರಾದರೂ ಅಜ್ಞಾನದಿಂದ ಅಂಥ ಪ್ರತಿಪಾದನೆಯನ್ನು ಮಾಡಬಹುದು ಅಷ್ಟೆ, ಭಕ್ತಿಮಾರ್ಗದಲ್ಲಿ ಸಾಗಿದರೆ ಕೂಡ ಮುಕ್ತಿ ಸಿಗುತ್ತದೆ. ಆ ಮಾರ್ಗದಲ್ಲಿ ಸಾಗಲಿಕ್ಕೆ ಮಂತ್ರ ತಂತ್ರಗಳ ಅರಿವು ಬೇಡವೇ ಬೇಡ. ಅಷ್ಟೇಕೆ? ಮುಕ್ತಿಯನ್ನು ಹೊಂದಲಿಕ್ಕೆ ಪರಮಾತ್ಮ ಕಲ್ಪನೆಯೂ ಬೇಡ ಎಂಬುದನ್ನು ಬೌದ್ಧ, ಜೈನರು ತೋರಿಸಿದ್ದಾರೆ. ಮುಕ್ತಿಗೆ ವೇದವೂ ಒಂದು ಮಾರ್ಗ ಅಷ್ಟೆ,

ಇದು ಕೇವಲ ನಮ್ಮ ಗ್ರಂಥಗಳಲ್ಲಿ ಬರುವ ವರ್ಣನೆಗಳು ಮಾತ್ರವಲ್ಲ, ಪ್ರಾಚೀನ ಕಾಲದಿಂದಲೂ ಬೇರೆ ಬೇರೆ ಜಾತಿ, ಬುಡಕಟ್ಟುಗಳ ಹಿನ್ನೆಲೆಯಿಂದ ಬಂದ ಋಷಿಮುನಿಗಳ, ಆತ್ಮಜ್ಞಾನಿಗಳ ಕಥೆಯನ್ನು ಹಾಗೂ ಚರಿತ್ರೆಯನ್ನು ನಮ್ಮ ಪರಂಪರೆಯು ದೃಷ್ಟಾಂತಗಳನ್ನಾಗಿ ಉಳಿಸಿಕೊಂಡು ಬಂದಿದೆ. ಮಧ್ಯ ಯುಗದಲ್ಲಿ ಭಕ್ತಿಮಾರ್ಗವನ್ನು ತುಳಿದು ಮಹಾತ್ಮರಾದ ಶರಣರು, ಸಂತರು, ದಾಸರು, ಆಳ್ವಾರುಗಳು, ನಾಯನಾರರು ಭಾರತದ ತುಂಬೆಲ್ಲ ಇದಕ್ಕೆ ದೃಷ್ಟಾಂತಗಳಾಗಿದ್ದಾರೆ. ಇಂದು ಈ ಉದಾಹರಣೆಗಳನ್ನೆಲ್ಲ ಸಾಮಾಜಿಕ ಚಳವಳಿಗಳೆಂದು ಗ್ರಹಿಸಿರುವುದರಿಂದ ಭಾರತೀಯ ಪರಂಪರೆಯ ನಿಜವಾದ ಮಹತ್ವವು ಕಣ್ಣಿಗೆ ಕಾಣದಂತಾಗಿದೆ.

ಹೀಗಿರುವಾಗ ವೇದವನ್ನು ಕಲಿಯಲು ನಿರ್ಬಂಧಿಸಿದಾಕ್ಷಣ ಮೋಕ್ಷಸಾಧನೆಯನ್ನೇ ನಿರಾಕರಿಸಲಾಯಿತು ಎಂಬ ತರ್ಕ ಎಲ್ಲಿಂದ ಹುಟ್ಟಿರಬಹುದು? ವೇದವನ್ನು ಬೈಬಲ್ಲು, ಖುರಾನಿಗೆ ಸಮೀಕರಿಸಿದಾಗ ಮಾತ್ರ ಅಂಥ ನಿರ್ಣಯ ಹುಟ್ಟಲು ಸಾಧ್ಯ. ಅಂದರೆ ಕ್ರೈಸ್ತ ಹಾಗೂ ಮುಸ್ಲಿಮರಲ್ಲಿ ಏಕೈಕ ಪವಿತ್ರಗ್ರಂಥ ಇದೆ ಹಾಗೂ ಅದೊಂದೇ ಸತ್ಯದೇವನನ್ನು ಸೇರಲು ಮಾರ್ಗ. ಅದನ್ನೇ ಅದರ ಅನುಯಾಯಿಗಳಿಗೆ ನಿಷೇಧಿಸಿದರೆ ಅವರಿಗೆ ಸ್ವರ್ಗದ ಬಾಗಿಲನ್ನು ಮುಚ್ಚಿದಂತೇ, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಪಾಶ್ಚಾತ್ಯರನ್ನು ಅನುಸರಿಸಿ ಭಾರತೀಯ ವಿದ್ವಾಂಸರೂ ಕೂಡ ವೇದಗಳು ಹಿಂದೂಯಿಸಂನ ಪವಿತ್ರ ಗ್ರಂಥ ಎಂಬುದಾಗಿ ಪ್ರತಿಪಾದಿಸಿದರು. ಅಂಥ ಪವಿತ್ರಗ್ರಂಥವನ್ನು ಶೂದ್ರರಿಗೆ ನಿಷೇಧಿಸಿದ್ದರು ಅಂದರೆ ಅವರಿಗೆ ಮೋಕ್ಷವನ್ನೇ ನಿರಾಕರಿಸಿದಂತೇ ಎಂಬ ನಿರ್ಣಯ ಅವರಿಗೆ ತರ್ಕಬದ್ಧವಾಗಿ ಕಂಡಿದ್ದು ಹೀಗೆ.

Subscribe For Newsletter

    About Us

    The Samhati Foundation established the Foundation for the Study of Indian Culture (FSIC: https://fsic.in/) a research division dedicated to the scientific study of Indian culture and traditions..

    Email Us: director@fsic.in

    Samhati  @2026. All Rights Reserved.

    Discover more from Samhati

    Subscribe now to keep reading and get access to the full archive.

    Continue reading