(ಈ ಲೇಖನ, ಕನ್ನಡ ವಾರಪತ್ರಿಕೆ “ವಿಕ್ರಮ”ದ, 12 ಎಪ್ರಿಲ್ 2026 ರ ಸಂಚಿಕೆಯಲ್ಲಿ ಮೊದಲು ಮುದ್ರಣಗೊಂಡಿದೆ. ಪೇಜ್: 25-27)
ಭಾರತೀಯರ ಸಾಮಾಜಿಕ ಜೀವನ, ರಾಜಕೀಯ ಜೀವನ, ಅಸ್ಮಿತೆ ಅವರ ನೈತಿಕ ಜಗತ್ತು ಇತ್ಯಾದಿಗಳ ಕುರಿತಾಗಿ ಇಂದು ಭಾರತದ ಒಳಗೂ ಮತ್ತು ಹೊರಗೂ ಗಂಭೀರವಾದ ಚರ್ಚೆ ನಡೆಯುತ್ತಿದೆ. ಈ ಚರ್ಚೆಗಳು ಸಾರ್ವಜನಿಕ ವಲಯದಿಂದ ಹಿಡಿದು ಅಕಾಡೆಮಿಕ್ ವಲಯದವರೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ. ಈ ಚರ್ಚೆಗಳಲ್ಲಿ ಭಾರತದ ಜಾತಿ ವ್ಯವಸ್ಥೆ, ಸ್ತ್ರೀಯರ ಸ್ಥಾನ-ಮಾನ, ತಳ ಸಮುದಾಯದ ಕುರಿತ ಚಿಂತನೆ, ತಂತ್ರಜ್ಞಾನ, ರಾಷ್ಟ್ರೀಯತೆ, ಸಂಸ್ಕೃತ, ಶಾಸ್ತ್ರ, ಜನಪದ ಹೀಗೆ ಅನೇಕ ವಿಷಯಗಳು ಸದ್ದು ಮಾಡುತ್ತಲೇ ಇರುತ್ತವೆ. ಈ ಚರ್ಚೆಗಳು ಎಡ ಬಲ ಇತ್ಯಾದಿ ಗುಂಪುಗಳ ಭಾಗವಾಗಿ ಹರಿದು ಹಂಚಿ ಹೋಗಿದ್ದು ಪುನಃ ಪುನಃ ನಮ್ಮ ಬೌದ್ಧಿಕ ಜಗತ್ತಿನ ಕೇಂದ್ರದಲ್ಲಿ ಆಗಾಗ ಪ್ರಕಟಗೊಳ್ಳುತ್ತವೆ. ಈ ಚರ್ಚೆಗಳಿಗೆ ನಿರ್ಣಾಯಕ ಅಂತ್ಯವೆಂಬುದೇನೋ ಇದ್ದಂತೆ ಕಾಣುತ್ತಿಲ್ಲ. ಹಾಗೂ ಈ ಚರ್ಚೆಗಳಲ್ಲಿ ಗೆದ್ದವರಾರು ಸೋತವರಾರು ಎಂಬುದನ್ನು ನಿರ್ಣಯಿಸುವುದು ಅತ್ಯಂತ ಕಷ್ಟಕರ.
ಆದರೆ ಜಾತಿವ್ಯವಸ್ಥೆ, ವರ್ಣಾಶ್ರಮದ ಚರ್ಚೆಗಳಿಂದ ಆರಂಭಿಸಿ ಮೀಸಲಾತಿಯವರೆಗಿನ ಎಲ್ಲ ಚರ್ಚೆಗಳೂ ನಮ್ಮ ಜೀವನದ ಮೇಲೆ ನಿರ್ಣಾಯಕವಾದ ಪ್ರಭಾವವನ್ನು ಬೀರುತ್ತವೆ. ಏಕೆಂದರೆ ಜಾತಿವ್ಯವಸ್ಥೆಯ ಹಿಂದಿನ ಕಥೆಗಳು ಅಥವಾ ವರ್ಣಾಶ್ರಮದ ಹಿಂದಿನ ಕಥೆಗಳು ಅಥವಾ ಮೀಸಲಾತಿಯ ಪರ-ವಿರೋಧದ ಹಿಂದಿನ ನಿರೂಪಣೆಗಳು ಕೇವಲ ಮಾತನಾಡುವ ವಿಷಯಗಳಲ್ಲ. ಬದಲಿಗೆ ಕಾನೂನು ಮತ್ತು ಆಡಳಿತಾತ್ಮಕ, ರಾಜಕೀಯ ಮತ್ತು ಕಾನೂನಿನ ವ್ಯಾಪ್ತಿಯನ್ನು ಹೊಂದಿವೆ. ಅಷ್ಟೇ ಅಲ್ಲ ಅವು ಇಂದು ನಾವು ನಮ್ಮ ಸುತ್ತ ಮುತ್ತಲಿನ ಮನುಷ್ಯರೊಡನೆ ಯಾವ ರೀತಿ ಬದುಕಬೇಕು ಮತ್ತು ವ್ಯವಹರಿಸಬೇಕು ಎಂಬ ಚಿಂತನೆಗಳನ್ನು ಪ್ರಭಾವಿಸುತ್ತವೆ. ಆ ಕಾರಣಕ್ಕಾಗಿಯೇ ಭಾರತೀಯ ಸಮಾಜದ ಕುರಿತಾದ ಯಾವ ನಿರೂಪಣೆಗಳು ನಮಗೆ ಉಪಯುಕ್ತ ಮತ್ತು ಅನುಭವಕ್ಕೆ ಹತ್ತಿರ ಎಂದು ಯೋಚಿಸಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ಮುಂದಿನ ಸಮಾಜದ ಭವಿಷ್ಯವನ್ನು ಅವು ಬದಲಾಯಿಸಿಯೇ ಬಿಡುತ್ತವೆ. ಆ ಕಾರಣಕ್ಕಾಗಿ, ಭಾರತೀಯರಾದ ನಾವು ಯಾರು, ನಮ್ಮತನವೇನು, ಈ ಭಾರತೀಯರಾಗುವಿಕೆಯ ಸ್ವರೂಪವೇನು, ಭಾರತೀಯನಾಗಿ ಬದುಕುವುದು ಎಂದರೆ ಆ ಜೀವನ ಯಾವ ರೀತಿಯದ್ದು ಇತ್ಯಾದಿಗಳ ಕುರಿತು ಗಂಭೀರವಾದ ಮತ್ತು ಮೌಲಿಕವಾದ ಪುನರವಲೋಕನ ಇಂದಿನ ಅಗತ್ಯವಾಗಿದೆ.
ಒಂದರ್ಥದಲ್ಲಿ ಭಾರತದ ಕುರಿತು ಪುನರವಲೋಕನ ಎನ್ನುವುದು ನಮ್ಮ ಸ್ವಂತಿಕೆಯ ಹುಡುಕಾಟದ ಭಾಗವೇ ಆಗಿದೆ. ಉದಾಹರಣೆಗೆ ಸುಮಾರು ಇನ್ನೂರು ವರ್ಷಗಳ ಹಿಂದೆ ಭಾರತದಲ್ಲಿ ಬ್ರಿಟಿಶ್ ಶಿಕ್ಷಣವನ್ನು ಪ್ರಾರಂಭಿಸುವ ಕಾಲಘಟ್ಟದಲ್ಲಿ ಭಾರತೀಯ ವಿದ್ಯಾರ್ಥಿಗಳು ಯಾವ ರೀತಿಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಯುರೋಪಿನವರು ಗಮನಿಸತೊಡಗಿದರು. ಆಗ ಅವರಿಗೆ ಕಂಡ ಭಾರತೀಯ ಶಿಕ್ಷಣದ ಪ್ರಮುಖ ದೋಷಷವೆಂದರೆ ಕಂಠಪಾಠ ಅಥವಾ ಬಾಯಿಪಾಠ ಮಾಡುವುದು. ಭಾರತದಾದ್ಯಂತ ಎಲ್ಲ ರೀತಿಯ ಕಲಿಕಾ ಕ್ರಮಗಳಲ್ಲಿ ಕಂಠಪಾಠ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿತ್ತು. ಅಂದರೆ ಸಹಸ್ರಾರು ವರ್ಷಗಳ ಕಾಲ ನಿರಂತರವಾಗಿ ಜ್ಞಾನವನ್ನು ಸೃಜಿಸಿದ ಭಾರತೀಯ ಸಂಸ್ಕೃತಿಯ ಕಲಿಕಾ ಕ್ರಮದ ಕೇಂದ್ರದಲ್ಲಿ ಕಂಠಪಾಠವೆಂಬುದು ಇತ್ತು. ಇಂತಹ ಒಂದು ಕಲಿಕಾ ಜಗತ್ತನ್ನು ನೋಡಿದ ಯುರೋಪಿಯನ್ನರಿಗೆ ಇದೊಂದು ಸಮಸ್ಯಾತ್ಮಕ ಸಂಗತಿಯಾಗಿ ಕಾಣತೊಡಗಿತು. ಅಂದು ಯುರೋಪಿನ ಅನುಭವದಲ್ಲಿ ಕಂಠಪಾಠವನ್ನು ‘Rote learning’ ಎಂದು ಕರೆದರು. ಯುರೋಪಿಯನ್ನರಿಗೆ ವಿಶೇಷತಃ ಪ್ರಾಟೆಸ್ಟಂಟರಿಗೆ ರೋಟ್ ಲರ್ನಿಂಗ್ ಎನ್ನುವುದು ಯಾವುದೇ ಜ್ಞಾನವನ್ನು ಸೃಜಿಸದ ಕಂಠಪಾಠವೆಂಬ ಅಭಿಪ್ರಾಯವಿತ್ತು. ಆ ಕಾರಣಕ್ಕಾಗಿಯೇ ಎಲ್ಲ ಶಿಕ್ಷಣ ಕ್ರಮಗಳಿಂದ ರೋಟ್ ಲರ್ನಿಂಗ್ ಅನ್ನು ನಿರ್ಮೂಲನೆ ಮಾಡುವುದು ಅವರ ಕಾಲದ ಸಾಂಸ್ಕೃತಿಕ ಜಗತ್ತಿನ ಪ್ರಮುಖ ಗುರಿಯಾಗಿತ್ತು. ಆ ಕಾಲಘಟ್ಟದ ಯುರೋಪಿಯನ್ನರು ಭಾರತದಲ್ಲಿ ಎಲ್ಲ ಮೂಲೆಗಳಲ್ಲೂ ವ್ಯಾಪಿಸಿದ್ದ ಕಂಠಪಾಠವನ್ನು ಅವರ ಜಗತ್ತಿನ ಅನುಭವದ ಮೂಸೆಯಿಂದ ರೋಟ್ ಲರ್ನಿಂಗ್ ಎಂದು ಗ್ರಹಿಸಿದರು. ಹಾಗಾಗಿಯೇ ಭಾರತೀಯ ಕಲಿಕಾ ಕ್ರಮದ ವಿಮೋಚನೆಯು ಎನ್ನುವುದು ರೋಟ್ ಲರ್ನಿಂಗ್ ಅಥವಾ ಕಂಠಪಾಠವನ್ನು ಭಾರತೀಯ ಕಲಿಕಾ ಪದ್ಧತಿಯಿಂದ ಸಂಪೂರ್ಣವಾಗಿ ಪದ್ಧತಿಯು ಮಾಡಿದಾಗ ಮಾತ್ರ ಸಾಧ್ಯ ಎಂದು ಭಾವಿಸಿದರು.
ಯುರೋಪಿಯನ್ನರ ಈ ಅನುಭವದ ಹಿನ್ನೆಲೆಯಲ್ಲಿಯೇ ಭಾರತದಲ್ಲಿ ಬ್ರಿಟಿಶ್ ಶಿಕ್ಷಣ ಪದ್ಧತಿಯು ರೂಪುಗೊಂಡಿತು. ಪ್ರಾರಂಭದಲ್ಲಿ ಬ್ರಿಟಿಶ್ ಶಿಕ್ಷಣ ಪದ್ಧತಿಯು ಭಾರತೀಯ ವಿದ್ಯಾರ್ಥಿಗಳ ಕಲಿಕೆಗೆ ದೊಡ್ಡ ಅಡಚಣೆ ಎಂದರೆ ಈ ಕಂಠಪಾಠವೇ ಎಂದು ಭಾವಿಸಿತು. ನಂತರ ಭಾರತದ ಎಲ್ಲ ಶಿಕ್ಷಣ ನೀತಿಗಳಲ್ಲೂ ಕಂಠಪಾಠದ ಮೂಲೋತ್ಪಾಟನೆಯೇ ಗುರಿಯಾಗಿ ಸ್ವತಂತ್ರ ಭಾರತದಲ್ಲೂ ಮುಂದುವರೆದು ಬಂದಿದೆ. ಇದರ ಪರಾಕಾಷ್ಠೆಯೆಂದರೆ ಇತ್ತೀಚಿನ ದಿನಗಳ ಶಿಕ್ಷಣ ನೀತಿಯ ದಾಖಲೆಗಳಲ್ಲಿ ಒಂದು ಕಡೆ ರೋಟ್ ಲರ್ನಿಂಗ್ ನ ಅಥವಾ ಕಂಠಪಾಠದ ನಿರ್ಮೂಲನೆ ಅತ್ಯಂತ ಪ್ರಮುಖ ವಿಷಯವೆಂದು ನಿರೂಪಿಸಿ ಇನ್ನೊಂದೆಡೆ ಸ್ಮೃತಿಯನ್ನು (ನೆನಪಿಟ್ಟುಕೊಳ್ಳುವುದು) ಕೇಂದ್ರಕ್ಕೆ ತರಬೇಕೆಂದು ಹೇಳಿದ್ದಾರೆ. ಹೀಗೆ ವಿರೋಧವಿದ್ದರೂ ಈ ಎರಡೂ ನೀತಿಗಳ ನಡುವೆ ಯಾವುದೇ ವಿರೋಧವಿಲ್ಲ ಎಂದು ಮಾತನಾಡುವ ಸ್ಥಿತಿಯನ್ನು ತಲುಪಿದ್ದಾರೆ. ಅವರಿಗೆ ರೋಟ್ ಲರ್ನಿಂಗ್ ನ ನಿರ್ಮೂಲನೆ ಎಂದರೆ ವಸ್ತುತಃ ಸ್ಮೃತಿಯ ನಿರ್ಮೂಲನೆ ಎಂಬ ವಿಷಯ ಕಾಣುತ್ತಲೇ ಇಲ್ಲ. ಅಂದರೆ ಈ ಕಂಠಪಾಠಕ್ಕೆ ಸಂಬಂಧಿಸಿದ ವೈರುಧ್ಯದ ಉದಾಹರಣೆಯು, ಭಾರತೀಯರು ಯಾವ ರೀತಿ ತಮ್ಮ ಜಗತ್ತು ಮತ್ತು ಭವಿಷ್ಯವನ್ನು ಗ್ರಹಿಸುತ್ತಿದ್ದಾರೆ ಎನ್ನುವುದರ ಕುರಿತಾದ ತಿಳಿವಳಿಕೆಯನ್ನು ನಮ್ಮ ಕಣ್ಣು ಮುಂದೆ ತರುತ್ತದೆ.
ಕಳೆದ ಇನ್ನೂರು ವರ್ಷದಿಂದ ಬ್ರಿಟಿಶರ ಅನುಭವ ಕಟ್ಟಿಕೊಟ್ಟ ಕಥೆ, ಏಕೆ ಇಂದಿಗೂ ನಮ್ಮ ದೇಶದ ಶಿಕ್ಷಣ ನೀತಿಯನ್ನು ನಿರ್ದೇಶಿಸಬೇಕು? ಒಂದೋ ಭಾರತೀಯರ ಕುರಿತಾದ ಬ್ರಿಟಿಶರ ನಿರೂಪಣೆ ಸತ್ಯವಾಗಿರಬೇಕು ಅಥವಾ ನಮ್ಮ ತಿಳಿವಳಿಕೆಯಲ್ಲಿ ಏನೋ ಸಮಸ್ಯೆ ಇದ್ದಿರಬೇಕು. ನಮಗೆಲ್ಲರಿಗೂ ತಿಳಿದಿರುವಂತೆ ಯುರೋಪಿಯನ್ನರು ಭಾರತದ ಕುರಿತು ಕಟ್ಟಿಕೊಟ್ಟ ಚಿತ್ರಣವು, ಭಾರತೀಯರ ಜೀವನ, ನಡೆ-ನುಡಿಗಳನ್ನು ಗ್ರಹಿಸಲು ಉಪಯುಕ್ತವಲ್ಲ. ಆದರೆ ಮೇಲೆ ತೋರಿಸಿದ ಉದಾಹರಣೆಯಲ್ಲಿ ಯುರೋಪಿಯನ್ನರ ಕಥೆಯನ್ನು ಸತ್ಯವೆಂದು ನಂಬಿ ನಮ್ಮ ಶಾಲಾ ಶಿಕ್ಷಣದ ಕ್ರಮ, ಅಧ್ಯಾಪಕರ ತರಬೇತಿ, ಬೋಧನಾ ಶೈಲಿ ಇತ್ಯಾದಿಗಳನ್ನೆಲ್ಲ ಇಂದಿಗೂ ಮುಂದುವರಿಸುತ್ತಿರುವುದೇಕೆ ಎನ್ನುವುದು ಬಗೆಹರಿಸಲಾಗದ ಸಮಸ್ಯೆಗಳಾಗಿ ಉಳಿದುಕೊಂಡಿವೆ.
ಹಾಗೆ ನೋಡಿದರೆ ಭಾರತದ ಸ್ವತಂತ್ರ ಹೋರಾಟದ ಚಿಂತಕರು ಭಾರತದಲ್ಲಿ ಬ್ರಿಟಿಶ್ ಶಾಸನದ ವಿರುದ್ಧ ಆಂದೋಲನವನ್ನು ಕಟ್ಟುತ್ತಿರುವಾಗ ಅವರಿಗೆ ಕೆಲವು ಮೂಲಭೂತವಾದ ಉದ್ದೇಶಗಳಿದ್ದವು. ಅದರಲ್ಲಿ ಪ್ರಮುಖವಾದ ಸಂಗತಿ ‘ಸ್ವ’ಕ್ಕೆ ಸಂಬಂಧಪಟ್ಟದ್ದಾಗಿತ್ತು. ಹಾಗಾಗಿಯೇ ಬ್ರಿಟಿಶರ ಪರ-ತಂತ್ರದಿಂದ ನಮ್ಮ ದೇಶವನ್ನು ಮುಕ್ತಗೊಳಿಸಿ ಸ್ವ-ತಂತ್ರದಿಂದ ಸ್ವ-ರಾಜ್ಯವನ್ನು ಸ್ಥಾಪನೆ ಮಾಡುವ ಉದ್ದೇಶವು ಆಂದೋಲನವನ್ನು ರೂಪಿಸಿತ್ತು. ಆದರೆ ಈ ಸಂದರ್ಭದಲ್ಲಿ ಅವರು ಗ್ರಹಿಸಿದಂತೆ ಭಾರತದ ಕುರಿತಾದ ಬ್ರಿಟಿಶರ ನಿರೂಪಣೆಗಳು ಭಾರತದ ಸ್ವ-ತಂತ್ರ, ಸ್ವ-ರಾಜ್ಯ, ಸ್ವ-ದೇಶಿ, ಸ್ವ-ಧರ್ಮಗಳಿಗೆ ಪೂರಕವಾಗಿರಲಿಲ್ಲ. ಹಾಗಾಗಿ ಅವುಗಳ ವಿರುದ್ಧ ಸ್ವ-ತಂತ್ರದ ಅಗತ್ಯವಿದೆ ಎನ್ನುವ ಮೂಲಭೂತ ಆಶಯದೊಂದಿಗೆ ಈ ಆಂದೋಲನಗಳು ಭಾರತದಲ್ಲಿ ನಡೆದವು.
ಅಂದರೆ ಈ ಮೇಲೆ ಚರ್ಚಿಸಿದ ಕಂಠಪಾಠದ ಉದಾಹರಣೆಯು ಸ್ವತಂತ್ರದ ಭಾಗ. ಆದರೆ ಪರಕೀಯರು ಇದನ್ನು ನಿಕೃಷ್ಟವೆಂದು ಪರಿಗಣಿಸಿದರು. ಭಾರತೀಯ ಕಲಿಕಾ ಕ್ರಮದಲ್ಲಿ ಕೇವಲ ಕಂಠಪಾಠವೊಂದೇ ಇರಲಿಲ್ಲ, ಇನ್ನೂ ಅನೇಕ ಕಲಿಕಾ ಉಪಕ್ರಮಗಳಿದ್ದವು. ಆದರೆ ಆ ಭಿನ್ನ ಕಲಿಕಾ ಕ್ರಮಗಳನ್ನು ಹೇಗೆ ಸಂಯೋಜಿಸುವುದು ಎಂದು ಯೋಚಿಸುವಾಗ ಭಾರತೀಯ ಕಲಿಕಾ ಪದ್ಧತಿಯಲ್ಲಿ ಕಂಠಪಾಠವು ಬಹು ಮಹತ್ತ್ವದ ಸ್ಥಾನವನ್ನು ಹೊಂದಿತ್ತು. ಆದರೆ ಇಂದು ಯುರೋಪಿಯನ್ನರ ಆಡಳಿತವಿಲ್ಲದಿದ್ದರೂ ನಾವೇ ನಮ್ಮದೇ ನೀತಿ ನಿರೂಪಣೆಯ ವಿಷಯದಲ್ಲಿ ನಮ್ಮ ಸ್ವ-ತಂತ್ರಕ್ಕೆ ವಿರುದ್ಧವಾಗಿ ಯುರೋಪಿಯನ್ನರ ನಿರೂಪಣೆಗಳನ್ನು ನಮ್ಮದಾಗಿಸಿಕೊಂಡಿದ್ದೇವೆ. ಅಂದರೆ ಆಚಾರದಲ್ಲೂ ವಿಚಾರದಲ್ಲೂ ನಮ್ಮ ಸ್ವಂತಿಕೆಯನ್ನು ಕಳೆದುಕೊಂಡಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ. ಈ ರೀತಿಯ ನೂರಾರು ಉದಾಹರಣೆಗಳ ಮೂಲಕ ನಮ್ಮ ದೈನಂದಿನ ಜೀವನದಲ್ಲಿನ ಮಾತುಕತೆ, ಕಥಾನಕ, ನಡವಳಿಕೆಗಳಲ್ಲಿ ಹಾಸುಹೊಕ್ಕಾಗಿರುವ ಬೌದ್ಧಿಕ ದಾಸ್ಯವನ್ನು ತೋರಿಸಬಹುದು.
ಇಲ್ಲಿ ಗಮನಿಸಬೇಕಾಗಿರುವ ಮುಖ್ಯ ಅಂಶವೆಂದರೆ ನಮ್ಮ ಸ್ವಂತಿಕೆಗೆ ವಿರುದ್ಧವಾದುದೆಲ್ಲವನ್ನೂ ನಮ್ಮ ಮೇಲೆ ನಾವು ಆರೋಪಿಸಿಕೊಂಡಿದ್ದೇವೆ. ಕಳೆದ ಎರಡು ಶತಮಾನಗಳ ಯುರೋಪಿಯನ್ ವಸಾಹತು ಚಿಂತನೆಗಳು ನಮ್ಮನ್ನು ನಮ್ಮ ಅನುಭವಗಳಿಂದ ವಿಮುಖ ಮಾಡಿವೆ. ಆ ಕಾರಣಕ್ಕಾಗಿಯೇ ಭಾರತದಲ್ಲಿನ ಹಿಂದೂ ರಿಲಿಜನ್ ಕುರಿತಾದ, ಜಾತಿ ವ್ಯವಸ್ಥೆಯ ಕುರಿತಾದ, ಭಕ್ತಿ ಪರಂಪರೆಯ ಕುರಿತಾದ ಇಂದಿನ ಸಾರ್ವಜನಿಕ ಚರ್ಚೆಗಳು ಈ ವಸಾಹತು ಚಿಂತನೆಯ ಮೂಸೆಯಿಂದಲೇ ಹುಟ್ಟಿವೆ. ಇದರ ವಿಚಿತ್ರವೇನೆಂದರೆ ಒಂದು ಗುಂಪಿನವರು ಭಾರತದ ದೊಡ್ಡ ಸಮಸ್ಯೆ ಎಂದರೆ ಹಿಂದೂ ರಿಲಿಜನ್ ಎಂದೂ, ಆ ಕಾರಣಕ್ಕಾಗಿ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುತ್ತಾರೆ. ಇನ್ನೊಂದು ಗುಂಪಿನವರು ಭಾರತದ ಸಮಸ್ಯೆ ಹಿಂದೂ ರಿಲಿಜನ್ ಆದರೂ ಇದರ ಪರಿಹಾರ ವೇದಗಳಿಗೆ ಹಿಂತಿರುಗುವುದರಲ್ಲಿ ಇದೆ ಎನ್ನುತ್ತಾರೆ. ಆದರೆ ಈ ಹಿಂದೂಯಿಸಂ ಎನ್ನುವುದೇ ಯುರೋಪಿಯನ್ ಚಿಂತನೆಯಿಂದ ಹುಟ್ಟಿದ್ದು, ಹಾಗೂ ಹಿಂದೂಯಿಸಂಗೂ ಮತ್ತು ಭಾರತದಲ್ಲಿ ಬದುಕುತ್ತಿರುವ ಹಿಂದೂಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಯಾರೂ ಗುರುತಿಸಿದಂತೆ ಕಾಣುತ್ತಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಇಂದಿನ ನಮ್ಮ ಕುರಿತಾದ ನಮ್ಮ ತಿಳಿವಳಿಕೆಗಳು ಯುರೋಪಿನ ಅನುಭವದ ನಕಲುಗಳಾಗಿವೆ. ಆ ಕಾರಣಕ್ಕಾಗಿಯೇ ಭಾರತದಲ್ಲಿ ಎಲ್ಲವೂ ಅದ್ಭುತವಾಗಿತ್ತು ಅಥವಾ ಇಲ್ಲಿರುವುದೆಲ್ಲವೂ ನಿಕೃಷ್ಟವಾಗಿತ್ತು ಎನ್ನುವ ಚರ್ಚೆಗಳ ಆಚೆಗೆ ಭಾರತವನ್ನು ನಮ್ಮ ಸ್ವಂತಿಕೆಯ ಮೇಲೆ, ಅನುಭವದ ಮೇಲೆ ಗ್ರಹಿಸುವ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ.
ನಮ್ಮ ಇಂದಿನ ಪರಿಸ್ಥಿತಿಯ ಕುರಿತು ಸರಿಯಾಗಿ ಗ್ರಹಿಸಬೇಕಾದರೆ ಶಂಕರ ಭಗವತ್ಪಾದರು ಬಳಸಿರುವ ಅಧ್ಯಾಸ ಎನ್ನುವ ಪರಿಕಲ್ಪನೆಯು ಉಪಯುಕ್ತ. ಶಂಕರರ ಪ್ರಕಾರ ಅಧ್ಯಾಸ ಎಂದರೆ, ಒಂದು ವಸ್ತುವಿಗೆ ಬೇರೆಯ ವಸ್ತುವಿನ ಗುಣಲಕ್ಷಣವನ್ನು ಆರೋಪಿಸುವುದು ಅಧ್ಯಾಸ. ಶಂಕರಾಚಾರ್ಯರು ಅಧ್ಯಾಸವೆಂಬುದು ಹೇಗೆ ತಿಳಿವಳಿಕೆಗೆ ಅಡ್ಡಿಯಾಗಿದೆ ಎಂಬುದನ್ನು ವಿಸ್ತಾರವಾಗಿ ಬ್ರಹ್ಮಸೂತ್ರದ ಭಾಷ್ಯದಲ್ಲಿ ತಿಳಿಸಿದ್ದಾರೆ. ಇದನ್ನು ಅದ್ವೈತದಲ್ಲಿ ಸರ್ಪ-ರಜ್ಜು ನ್ಯಾಯವೆಂದು ಚರ್ಚಿಸಿದ್ದಾರೆ. ಅಧ್ಯಾಸದ ಸಂದರ್ಭದಲ್ಲಿ ಹಗ್ಗವನ್ನು ನೋಡುಗನೊಬ್ಬ ಹಾವೆಂದು ಭ್ರಮಿಸಿದಾಗ ಹಗ್ಗದ ಸ್ವಭಾವವು ಮುಚ್ಚಿ ಹೋಗಿ ಹಾವಿನ ಸ್ವಭಾವವು ಅದರಲ್ಲಿ ಕಾಣತೊಡಗುತ್ತದೆ. ಇತರರಿಂದ ಕೇಳಿ ತಿಳಿದಾಗ ಅಥವಾ ತಾನೇ ಜಾಗರೂಕನಾಗಿ ಪರೀಕ್ಷಿಸಿ ತಿಳಿದಾಗ ಹಾವು ಎಂಬ ವಸ್ತುವಿನ ಸ್ವಭಾವವು ಹಗ್ಗವೆಂಬ ವಸ್ತುವಿನಲ್ಲಿ ಆರೋಪಿತವಾಗಿತ್ತೆಂದು ತಿಳಿದು ಭ್ರಮೆಯು ನಿವಾರಣೆಯಾಗುತ್ತದೆ.
ಈ ಉದಾಹರಣೆಯನ್ನು ಮೇಲೆ ವಿವರಿಸಿದ ಭಾರತೀಯರ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿ ನೋಡಿದಾಗ ನಮ್ಮ ತಿಳಿವಳಿಕೆಯ ವ್ಯಾಪ್ತಿ ವಿಸ್ತಾರವಾಗುತ್ತದೆ. ಯುರೋಪಿನವರು ಭಾರತವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅವರು ಭಾರತವೆಂಬ ಹಗ್ಗವನ್ನು ಹಾವೆಂದು ಭ್ರಮಿಸಿದರು. ತದನಂತರ ಅವರ ನಡುವೆ ಭಾರತವೆಂಬ ಹಾವಿನ ಬಗ್ಗೆ ವಿಸ್ತಾರವಾದ ಚರ್ಚೆ ಬೆಳೆದು ಅದನ್ನು ನಮ್ಮ ವಿಶ್ವವಿದ್ಯಾಲಯಗಳು ಕಲಿಕಾ ಕ್ರಮದ ಮುಖಾಂತರ ಕ್ರಮಬದ್ಧವಾಗಿ ಸಾಂಸ್ಥಿಕವಾಗಿ ಬೋಧಿಸತೊಡಗಿದವು. ಯುರೋಪಿಯನ್ನರು ಕಂಡ ಭಾರತವೆಂಬ ಹಾವಿನ ಕುರಿತು ಸ್ವತಂತ್ರಾನಂತರ ಭಾರತೀಯ ಚಿಂತಕರು ವಿಸ್ತಾರವಾದ ವಿವರಣೆಗಳನ್ನು ಕಟ್ಟತೊಡಗಿದರು. ಈ ಎಲ್ಲ ನಿರೂಪಣೆಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎಂಬ ಚರ್ಚೆಯೇ ಸಾಧ್ಯವಿಲ್ಲ. ಯಾಕೆಂದರೆ ಇದು ಯುರೋಪಿಯನ್ನರ ಅನುಭವ. ಎಲ್ಲಿಯವರೆಗೆ ನಾವು ಅಧ್ಯಯನ ಮಾಡಬೇಕಾಗಿರುವುದು ಹಗ್ಗವನ್ನು ಹಾವನ್ನಲ್ಲ ಎಂಬ ಅರಿವಾಗುವುದಿಲ್ಲವೋ ಅಲ್ಲಿಯವರೆಗೆ ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರದ ಆದರೆ ಯುರೋಪಿಯನ್ನರ ಅನುಭವದ ಭಾಗವಾಗಿ ಮುಂದುವರಿದ ಭಾರತವೆಂಬ ಹಾವಿನ ಕುರಿತಾದ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಈ ಚರ್ಚೆಗಳಿಗೆ ಯಾವ ಅನುಭವದ ಅಸ್ತಿತ್ವದ ಸಂಬಂಧಗಳೂ ಇರುವುದಿಲ್ಲ.
ಆ ಕಾರಣಕ್ಕಾಗಿಯೇ ಭಾರತದಲ್ಲಿ ಶತಮಾನಗಳ ಕಾಲ ರೋಟ್ ಲರ್ನಿಂಗ್ ಎಂಬ ಹೆಸರಿನಲ್ಲಿ ಕಂಠಪಾಠವನ್ನು ನಿರ್ಮೂಲನೆ ಮಾಡುವ ನಿರಂತರ ಪ್ರಯತ್ನಗಳ ನಂತರವೂ ಸಮಸ್ಯೆ ಪರಿಹಾರವಾದಂತೆ ಕಾಣುವುದಿಲ್ಲ. ಹಾಗೆಯೇ ಶತಮಾನಗಳ ಹೋರಾಟದ ನಂತರ ಭಾರತದಲ್ಲಿ ಜಾತಿವ್ಯವಸ್ಥೆಯು ಕಾಣೆಯಾದಂತೆ ತೋರುವುದಿಲ್ಲ. ಈ ಕಾರಣಕ್ಕಾಗಿಯೇ ಭಾರತದ ಕುರಿತು ವಸಾಹತು ನಿರೂಪಣೆಗಳನ್ನು ಅಧ್ಯಾಸವೆಂದು ಪರಿಗಣಿಸಿದರೆ ನಮಗೆ ನಮ್ಮ ಬಗ್ಗೆ ಇರುವ ತಿಳಿವಳಿಕೆಯ ಮಿತಿ ಅರ್ಥವಾಗುತ್ತದೆ. ಅಲ್ಲದೇ ನಾವು ನಮ್ಮ ಬಗ್ಗೆ ಮಾಡುತ್ತಿರುವ ಚರ್ಚೆಗಳ ನಿರುಪಯುಕ್ತತೆಯ ಸ್ವರೂಪವು ಅರ್ಥವಾಗುತ್ತದೆ. ಅಷ್ಟೇ ಅಲ್ಲ ನಮ್ಮ ಅನುಭವದ ಮೇಲೆ ಪುನರ್ನಿಮಿಸಿಕೊಳ್ಳಬೇಕಾದ ನಮ್ಮ ಪರ್ಯಾಯ ನಿರೂಪಣೆಗಳ ಜಗತ್ತೊಂದು ತೆರೆದುಕೊಳ್ಳುತ್ತದೆ. ಆದ್ದರಿಂದಲೇ ಈ ಪರ್ಯಾಯ ಜಗತ್ತು ನಮ್ಮ ಬಗೆಗಿನ ಅಜ್ಞಾನದ ನಿವಾರಣೆ ಮತ್ತು ಸರಿಯಾದ ತಿಳಿವಳಿಕೆಗೆ ಅನಿವಾರ್ಯ. ಈ ಪರ್ಯಾಯ ಮಾರ್ಗ ನಮ್ಮ ಬೌದ್ಧಿಕ ದಾಸ್ಯದ ವಿರುದ್ಧ ವಸಾಹತು ನಿರೂಪಣೆಗಳ ವಿರುದ್ಧ ಸ್ವ-ತಂತ್ರದ ಇನ್ನೊಂದು ಹೋರಾಟ.


