(ಈ ಲೇಖನ, ಕನ್ನಡ ವಾರಪತ್ರಿಕೆ “ವಿಕ್ರಮ”ದ, 24 ಮೇ 2026 ರ ಸಂಚಿಕೆಯಲ್ಲಿ ಮೊದಲು ಮುದ್ರಣಗೊಂಡಿದೆ. ಪೇಜ್: 21-23)
ನಮ್ಮ ದೈನಂದಿನ ಆಗು ಹೋಗುಗಳ ಕುರಿತು ಚರ್ಚಿಸುವಾಗ ಮತ್ತು ಆಲೋಚಿಸುವಾಗ ನಮ್ಮ ಬದುಕಿಗೆ ಪೂರಕವಾಗಿರುವ ಒಳಿತು-ಕೆಡುಕುಗಳ ಕುರಿತು ನಿರ್ಣಯ ಮಾಡುವುದು ಅನಿವಾರ್ಯವಾಗಿರುತ್ತದೆ. ಈ ಒಳಿತು-ಕೆಡುಕುಗಳ ಮಾಪನ ರಾಜಕೀಯ ಮತ್ತು ಸಾಮಾಜಿಕ ಜೀವನ ಸಂದರ್ಭದಲ್ಲಿ ಅನೇಕ ಬಾರಿ ಅತ್ಯಂತ ಕ್ಲಿಷ್ಟವೂ ಜಟಿಲವೂ ಆಗಿಬಿಡುತ್ತದೆ. ಈ ಒಳಿತು-ಕೆಡುಕುಗಳು ಕಾಲ ಬಾಹ್ಯವಾದ ವಿಚಾರವೇನಲ್ಲ. ಬೇರೆ ಬೇರೆ ಸಂದರ್ಭದಲ್ಲಿ ದೇಶಕಾಲಕ್ಕೆ ಅನುಗುಣವಾಗಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ನಿರ್ಧರಿಸುವುದು ನಿರಂತರವಾಗಿ ನಡೆಯುತ್ತಾ ಇರುತ್ತಾದರೂ ಇದು ಅತ್ಯಂತ ಜಟಿಲ ಪ್ರಕ್ರಿಯೆಯಾಗಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳತೊಡಗಿದೆ. ಹಿಂದಿನ ಕಾಲದಲ್ಲಿ ಹೆಚ್ಚು ಸಾಕ್ಷರರ ಕೊರತೆ ನಮ್ಮ ಸಮಾಜದಲ್ಲಿ ಇತ್ತೆಂದು ವಾದಿಸಿದರೂ ಹಿಂದಿನವರು ತಮ್ಮ ಅನುಭವದಿಂದ ಕೆಲವು ನಿರ್ಣಾಯಕವಾದ ಒಳಿತು-ಕೆಡುಕಗಳ ಕುರಿತಾದ ನಿರ್ಣಯಗಳನ್ನು ಮಾಡಿ ಆಚರಣೆಗೆ ತರಲು ಪ್ರಬುದ್ಧರೂ ಸಿದ್ಧರೂ ಆಗಿದ್ದರು. ಆದರೆ ಆ ತಿಳಿವಳಿಕೆಯನ್ನು ನಮ್ಮದಾಗಿಸಿಕೊಳ್ಳುವ ಪ್ರಕ್ರಿಯೆ ಇಂದು ಬುಡಮೇಲಾದಂತಿದೆ. ಈ ಅನಿಸಿಕೆಯನ್ನು ಸರಿಯಾಗಿ ಗ್ರಹಿಸಲು ಒಂದು ಉದಾಹರಣೆಯನ್ನು ಬಳಸಿಕೊಂಡರೆ ಹೆಚ್ಚು ಉಪಯುಕ್ತವಾದೀತು.
ಇತ್ತೀಚಿನ ದಿನಗಳಲ್ಲಿ ನಮ್ಮ ಸಾರ್ವಜನಿಕ ಜೀವನದಲ್ಲಿ ಸಾಂಪ್ರದಾಯಿಕತೆಯನ್ನು ವಿರೋಧಿಸುವ ಮತ್ತು ತಿರಸ್ಕರಿಸುವ ಮಾತುಕತೆಯೊಂದು ಸಾಮಾನ್ಯವಾಗಿ ಕಾಣಸಿಗುತ್ತದೆ. ಈ ಸಾಂಪ್ರದಾಯಿಕತೆಯನ್ನು ವಿರೋಧಿಸುವುದರಲ್ಲಿ ಸಾಕ್ಷರರು, ಪ್ರಗತಿಶೀಲರು, ಉದಾರವಾದಿಗಳು, ಎಡಪಂಥೀಯರು, ಅನೇಕಾನೇಕ ಹಿಂದೂ ರಾಷ್ಟ್ರೀಯವಾದಿಗಳೂ ಎಲ್ಲರೂ ಸೇರಿದ್ದಾರೆ. ಅನೇಕ ಬಾರಿ ನಮ್ಮ ಚಿಂತಕರು ಮತ್ತು ವಿಶ್ವವಿದ್ಯಾನಿಲಯಗಳ ಅಧ್ಯಾಪಕರು ಕೆಲವು ಸತ್ಯಗಳನ್ನು ಮಾತನಾಡಿದರೆ, ಕೆಲವು ರೀತಿಯ ಬಟ್ಟೆಯನ್ನು ಧರಿಸಿದರೆ ತನ್ನನ್ನು ಸಾಂಪ್ರದಾಯಿಕನೆಂದು ಕರೆದುಬಿಡುತ್ತಾರೆ ಎಂದು ಭಯಪಡುವುದು ಸಾಮಾನ್ಯವಾಗಿ ನಮಗೆ ಕಾಣಸಿಗುತ್ತದೆ. ನಮ್ಮ ಅನೇಕ ಚಿಂತಕರ ಬರಹಗಳಲ್ಲಿ ಕೆಲವು ಬದುಕಿನ ಕ್ರಮಗಳನ್ನು ಮತ್ತು ಕೆಲವು ಗುಂಪುಗಳನ್ನು ಸಂಪ್ರದಾಯವಾದಿಗಳು ಅಥವಾ ಸಾಂಪ್ರದಾಯಿಕರು ಎಂದು ಗುರುತಿಸುವುದೇ ಒಂದು ದೊಡ್ಡ ಕೆಲಸವಾದಂತಿದೆ. ಸಂಪ್ರದಾಯವಾದವನ್ನು ಭಾರತದ ಭೂಪಟದಿಂದ ನಿರ್ನಾಮ ಮಾಡುವುದೇ ತಮ್ಮ ಜೀವನದ ಪರಮೋದ್ದೇಶವೆಂದು ಅನೇಕರು ಪಣತೊಟ್ಟಂತೆಯೂ ಕಾಣುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸಂಪ್ರದಾಯ, ಸಂಪ್ರದಾಯವಾದ, ಪಾರಂಪರಿಕ, ಸಾಂಪ್ರದಾಯಿಕ, ಇತ್ಯಾದಿಗಳು ಆಧುನಿಕ ಸಮಾಜದಲ್ಲಿ ಘನಘೋರ ವಿಕೃತಿಯೆಂದು ಅನೇಕರು ಭಾವಿಸಿದಂತಿದೆ. ಆ ಕಾರಣಕ್ಕಾಗಿ ಪರಂಪರೆಗಳ ತಿರಸ್ಕಾರ, ಸಾಂಪ್ರದಾಯಿಕತೆಯ ವಿರುದ್ಧ ಹೋರಾಟ, ಇತ್ಯಾದಿಗಳನ್ನು ಆದರ್ಶವೆಂದು ಅನೇಕರು ಪರಿಗಣಿಸಿದಂತೆಯೂ ಕಾಣುತ್ತದೆ.
ಆದರೆ ಯಾರಾದರೊಬ್ಬರು ಪರಂಪರೆಯ ಭಾಗವಾಗಿರುವುದು ಅಥವಾ ಸಾಂಪ್ರದಾಯಿಕವಾಗಿರುವುದು ಸಮಸ್ಯೆ ಏಕಾಗಬೇಕು? ಸಂಪ್ರದಾಯವನ್ನು ಪಾಲಿಸುವುದು ಕೆಟ್ಟ ವಿಷಯವಾಗಲು ಕಾರಣವೇನು? ಪರಂಪರೆಯನ್ನು ಏಕೆ ತಿರಸ್ಕರಿಸಬೇಕು ಎನ್ನುವ ಪ್ರಶ್ನೆಗಳು ಸ್ವಲ್ಪ ಆಲೋಚನೆಯನ್ನು ಬೇಡುತ್ತವೆ.
ನಮ್ಮ ಕಣ್ಮುಂದೆ ಯಾರು ಈ ಸಾಂಪ್ರದಾಯಿಕರು ಎನ್ನುವ ಪ್ರಶ್ನೆಯೊಂದನ್ನು ತೆಗೆದುಕೊಳ್ಳೋಣ. ಸಾಂಪ್ರದಾಯಿಕರೆಂದರೆ ದೇವಸ್ಥಾನಕ್ಕೆ ಹೋಗುವವರು, ಧರ್ಮಶ್ರದ್ಧೆ ಉಳ್ಳವರು, ಸಂನ್ಯಾಸಿಗಳು ಮತ್ತು ಅವರ ಅನುಯಾಯಿಗಳು, ಮಠಮಾನ್ಯಗಳಿಗೆ ಸಂಬಂಧಪಟ್ಟ ಜನರು, ಶ್ರದ್ಧಾ ಭಕ್ತಿಯಿಂದ ಪೂಜೆ ಪುನಸ್ಕಾರ ಮಾಡುವವರು, ಈ ಹಿಂದೆ ಚಾಲ್ತಿಯಲ್ಲಿದ್ದ ಆಚಾರ ವಿಚಾರಗಳನ್ನು ಬದಲಿಸಲು ಸುಲಭವಾಗಿ ಒಪ್ಪದವರು ಇತ್ಯಾದಿ ಜನರನ್ನು ಸಾಂಪ್ರದಾಯಿಕರು ಎಂದು ಗುರುತಿಸುತ್ತಾರೆ. ಈ ರೀತಿ ಇರುವುದರಿಂದ ಏನು ಸಮಸ್ಯೆ? ಇವರನ್ನು ಯಾಕೆ ತಿರಸ್ಕರಿಸಬೇಕು? ಇವರು ಈ ಜಗತ್ತಿಗೆ ಮಾಡುವ ತೊಂದರೆಯಾದರೂ ಏನು ಎನ್ನುವುದು ಅಸ್ಪಷ್ಟ. ಈ ಮೇಲಿನ ಪ್ರಶ್ನೆಯನ್ನು ನನ್ನ ಪ್ರಗತಿಪರ ಮಿತ್ರರಲ್ಲೊಮ್ಮೆ ಕೇಳಿದಾಗ ಅವರು ಹೇಳಿದ ಉತ್ತರವು ಬಹಳ ಆಸಕ್ತಿದಾಯಕವಾಗಿತ್ತು. ಅವರ ಪ್ರಕಾರ ಈ ಮೇಲೆ ಸೂಚಿಸಿದ ಜನಗಳಿಂದ ತೊಂದರೆ ಏನಿಲ್ಲ. ಆದರೆ ಅಂತಹ ಜನಗಳ ಹಿಂದಿನ ಮನಸ್ಥಿತಿ ಹೇಗಿದೆಯೋ ಅದು ಈ ಜಗತ್ತಿಗೆ ಮಾರಕ. ಈ ಮೇಲೆ ಸೂಚಿಸಿದ ಜನಗಳ ಮನಸ್ಥಿತಿಯ ನಿಜವಾದ ಸಮಸ್ಯೆ ಏನು ಎಂದು ಕೇಳಿದಾಗ ಅದಕ್ಕೆ ನಿರ್ದಿಷ್ಟವಾದ ಉತ್ತರ ದೊರಕಲಿಲ್ಲ.
ಅದನ್ನು ಅವರು ವಿವರಿಸುವಾಗ ಈ ಜಗತ್ತಿನ ಕೆಲ ವಿದ್ಯಮಾನಗಳ ಬಗ್ಗೆ ತಕರಾರು ಇದ್ದಂತಿತ್ತು. ಅವರ ಪ್ರಕಾರ ಇಸ್ರೋದಲ್ಲಿ ರಾಕೆಟ್ ಹಾರಿಸುವ ವಿಜ್ಞಾನಿಗಳು ರಾಕೆಟಿನ ಪಡಿಯಚ್ಚೊಂದನ್ನು ತಿರುಪತಿ ತಿಮ್ಮಪ್ಪನಿಗೆ ಸಮರ್ಪಿಸುವುದು ಸಾಂಪ್ರದಾಯಿಕತೆಯಿಂದ ಹುಟ್ಟುವ ಮೌಢ್ಯವಾಗಿದೆ, ಹಾಗಾಗಿ ಅದನ್ನು ತಿರಸ್ಕರಿಸಬೇಕು ಎಂದು ಹೇಳಿದರು. ಆದರೆ ತಿರುಪತಿ ತಿಮ್ಮಪ್ಪನಿಗೆ ರಾಕೆಟಿನ ಪಡಿಯಚ್ಚನ್ನು ಸಮರ್ಪಿಸಿದ ವಿಜ್ಞಾನಿಗಳು ತಮ್ಮ ಪ್ರಯೋಗಶಾಲೆಯಲ್ಲಿ ಮಾಡಬೇಕಾದ ಕೆಲಸವನ್ನು ಸರಿಯಾಗಿಯೇ ಮಾಡಿದ್ದರು. ಇದರಲ್ಲಿ ತೊಂದರೆ ಏನಿದೆ ಎಂದು ಅವರನ್ನು ಸ್ಪಷ್ಟವಾಗಿ ಕೇಳಿದಾಗ ಇದು ಅವೈಜ್ಞಾನಿಕ, ಮೌಢ್ಯ ಇತ್ಯಾದಿಯಾಗಿ ಹೇಳಿದರೂ ಕೂಡ ಇಲ್ಲಿ ಸಾಂಪ್ರದಾಯಿಕತೆಯ ಸಮಸ್ಯೆ ಏನು ಮತ್ತು ಅದನ್ನು ಏಕೆ ತಿರಸ್ಕರಿಸಬೇಕು ಎನ್ನುವುದು ಅಸ್ಪಷ್ಟ. ಎ.ಕೆ.ರಾಮಾನುಜನ್ ತರಹದ ಮಹಾನ್ ಚಿಂತಕರಿಗೂ ಕೂಡ ಅವರ ತಂದೆ ಜ್ಯೋತಿಷಿಯಾಗಿದ್ದು ಅಂದರೆ ಸಾಂಪ್ರದಾಯಿಕವಾಗಿದ್ದು, ಆಧುನಿಕ ಗಣಿತವನ್ನು ಹೇಳಿಕೊಡುತ್ತಾ ಇದ್ದುದು ಬಗೆಹರಿಯಲಾರದ ಸಮಸ್ಯೆ ಆಗಿತ್ತು. ಆದರೆ ಸಾಂಪ್ರದಾಯಿಕ ಜ್ಯೋತಿಷಿಯೊಬ್ಬ ಆಧುನಿಕ ಗಣಿತವನ್ನು ಹೇಳಿಕೊಡುವುದರಲ್ಲಿ ಸಮಸ್ಯೆ ಏನು ಎನ್ನುವುದು ಅಲ್ಲಿ ಸ್ಪಷ್ಟವಾಗಿ ಪ್ರಕಟಗೊಳ್ಳುವುದಿಲ್ಲ. ಹಾಗಾದರೆ ಈಗ ನಮ್ಮ ಮುಂದಿರುವ ಸವಾಲಿನ ಸ್ವರೂಪದ ಕುರಿತು ಯೋಚನೆ ಮಾಡುವುದು ಹೇಗೆ ಎನ್ನುವುದು ಜಿಜ್ಞಾಸೆಯ ವಿಷಯವೇ ಸರಿ.
ಈ ಸಮಸ್ಯೆಯನ್ನು ಗ್ರಹಿಸಲು ಈಗಾಗಲೇ ನಾವು ಚರ್ಚಿಸಿರುವ ಅಧ್ಯಾಸದ ಕಲ್ಪನೆಗೆ ಮರಳುವುದು ಒಳಿತು. ಅಂದರೆ ಇಲ್ಲಿ ಸಂಪ್ರದಾಯದ ಕುರಿತು ಮಾತನಾಡುವಾಗ ಸಂಪ್ರದಾಯಕ್ಕೆ ಸಂಬಂಧಪಡದ ಬೇರೆ ಯಾವುದೋ ವಸ್ತುವನ್ನು ಸಂಪ್ರದಾಯವೆಂದು ಗ್ರಹಿಸಿ ಮಾತನಾಡಿದಂತೆ ತೋರುತ್ತದೆ. ಈ ಹಿಂದೆ ಚರ್ಚಿಸಿದಂತೆ ಸರ್ಪ ರಜ್ಜು ನ್ಯಾಯ ಅಥವ ಹಾವು-ಹಗ್ಗದ ಕಥಾನಕದಿಂದ ಈ ಸಮಸ್ಯೆಯನ್ನು ಸರಿಯಾಗಿ ಗ್ರಹಿಸಬಹುದು. ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಸಂಪ್ರದಾಯ(ಹಗ್ಗ)ವನ್ನು ರಿಲಿಜನ್(ಹಾವು) ಎಂದು ಆರೋಪಿಸಿ ಮಾತನಾಡಿದರೆ, ಈ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಇದನ್ನು ಸರಿಯಾಗಿ ಗ್ರಹಿಸಲು ಕಳೆದ ಎರಡು ಶತಮಾನಗಳಿಂದ ಭಾರತದ ಕುರಿತು ನಾವು ಆಲೋಚನೆ ಮಾಡುವ ಕ್ರಮಕ್ಕೆ ಹಿಂತಿರುಗಿ ಯೋಚಿಸಬೇಕಾಗುತ್ತದೆ.
ಕೆಲವು ಶತಮಾನಗಳ ಹಿಂದೆ ಯುರೋಪಿಯನ್ನರು ಭಾರತಕ್ಕೆ ಬಂದಿಳಿದಾಗ ಭಾರತದಾದ್ಯಂತ ಹಲವಾರು ಜಾತಿ,ಮತ, ಪಂಥಗಳು ಅವರಿಗೆ ಕಾಣತೊಡಗಿದವು. ಆದರೆ ಇವುಗಳನ್ನೆಲ್ಲ ಒಟ್ಟಾಗಿ ಗ್ರಹಿಸುವುದು ಹೇಗೆ ಎನ್ನುವ ಕುರಿತು ಯಾವ ವೈಜ್ಞಾನಿಕ ಸಿದ್ಧಾಂತಗಳೂ ಅವರ ಮುಂದಿರಲಿಲ್ಲ. ಹಾಗಾಗಿ ಅವರು ತಮ್ಮ ಅನುಭವದಲ್ಲಿ ಯುರೋಪಿನ ಸಮಾಜದಲ್ಲಿ ನಡೆದ ಮತ್ತು ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿಯೇ ಭಾರತವನ್ನು ಗ್ರಹಿಸುವ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದರು.
ಭಾರತದ ಕುರಿತು ಶತಮಾನಗಳ ಕಾಲ ಯುರೋಪಿಯನ್ನರು ತಮ್ಮೊಳಗೆ ಅನೇಕ ಚರ್ಚೆಗಳನ್ನು ಮಾಡಿ ನಂತರ ತಮ್ಮ ಯುರೋಪಿಯನ್ ಅನುಭವದ ಹಿನ್ನೆಲೆಯಲ್ಲಿ ಭಾರತೀಯ ಸಮಾಜದ ನಿರೂಪಣೆಗಳನ್ನು ಕಟ್ಟತೊಡಗಿದರು. ಯುರೋಪಿಯನ್ನರು ಭಾರತಕ್ಕೆ ಬಂದ ಕಾಲಘಟ್ಟದಲ್ಲಿ ಯುರೋಪಿಯನ್ ಸಮುದಾಯದ ಜಗತ್ತಿನ ಅನುಭವ ಈ ರೀತಿಯಾಗಿತ್ತು; ಅವರಲ್ಲಿ ಕ್ರಿಶ್ಚಿಯಾನಿಟಿಯೆಂಬ ಒಂದು ರಿಲಿಜನ್ನು ಅಸ್ತಿತ್ವದಲ್ಲಿತ್ತು. ಈ ರಿಲಿಜನ್ನಿನ ಪೂರ್ವದಲ್ಲಿ ರೋಮನ್ ಸಾಮ್ರಾಜ್ಯದ ಪೇಗನ್ನರಿದ್ದರು. ಕ್ರಿಶ್ಚಿಯನ್ ರಿಲಿಜನ್ನಿನ ಒಳಗೆ ಕ್ಯಾಥೋಲಿಕ್ಕರು ಮತ್ತು ಪ್ರಾಟೆಸ್ಟೆಂಟರೆಂಬ ಎರಡು ಪ್ರಮುಖ ಗುಂಪುಗಳಿದ್ದವು. ಪ್ರಾರಂಭಿಕವಾಗಿ ಪೇಗನ್ನರ ನಡುವೆ ಬೆಳೆದು ಬಂದ ಕ್ಯಾಥೋಲಿಕರನ್ನು ಆರ್ಥಾಡಾಕ್ಸ್ (Orthodox) ಎಂಬ ಶಬ್ದದಿಂದ ಗುರುತಿಸುತ್ತಿದ್ದರು.
ಅವರ ಪ್ರಕಾರ ಆರ್ಥೋಸ್ (Orthos) ಎಂದರೆ ಸರಿಯಾದ ಮತ್ತು ಡೋಕ್ಸಾ (Doxa) ಎಂದರೆ ಬಿಲೀಫ್ (Belief) ಅಥವಾ ನಂಬಿಕೆ. ಅಂದರೆ ಕ್ಯಾಥೋಲಿಕ್ ಪರಂಪರೆಯವರು ಸರಿಯಾದ ಬಿಲೀಫ್ ಅನ್ನು ದಾಟಿಸುತ್ತಿದ್ದೇವೆ ಭಾವಿಸುತ್ತಾರೆ, ಹಾಗಾಗಿ ಈ ಆರ್ಥೋಡಾಕ್ಸಿಯನ್ನು ತಿರಸ್ಕರಿಸಬೇಕು ಎಂದು ವಾದಿಸಲಾಯಿತು. ಆದರೆ ಸರಿಯಾದ ಬಿಲೀಫ್ ಅನ್ನು ಹೊಂದಿದ್ದರೆ ಅದನ್ನು ಪ್ರಾಟೆಸ್ಟಂಟರು ಯಾಕೆ ತಿರಸ್ಕರಿಸಬೇಕು ಎನ್ನುವ ಪ್ರಶ್ನೆ ಬರುತ್ತದೆ. ಕ್ಯಾಥೋಲಿಕರ ಪ್ರಕಾರ ಆರ್ಥಾಡಾಕ್ಸಿ ಎನ್ನುವುದು ಒಂದು ಉತ್ತಮ ಗುಣ. ಹಾಗಿದ್ದರೂ ಪ್ರಾಟೆಸ್ಟಂಟರಿಗೆ ಇದರಲ್ಲಿರುವ ತಕರಾರೇನು? ಅವರ ಪ್ರಕಾರ ಆರ್ಥಾಡಾಕ್ಸಗಳಾದ ಕ್ಯಾಥೋಲಿಕರು ದೇವವಾಣಿಯ ಜೊತೆಗೆ ಸುಳ್ಳು ರಿಲಿಜನ್ ಗಳಾಗಿರುವ ಪೇಗನ್ನರ ಬಿಲೀಫ್ ಗಳನ್ನು ಸೇರಿಸಿ ತಮ್ಮ ಪರಂಪರೆಗಳನ್ನು ರಚಿಸಿದ್ದಾರೆ. ಈ ಪರಂಪರೆಗಳಲ್ಲಿ ಮನುಷ್ಯಮಾತ್ರರಿಂದ ಉಂಟಾಗಬಹುದಾದ ದೋಷಗಳೆಲ್ಲವೂ ಸೇರಿವೆ. ನಿಜವಾದ ಅರ್ಥದಲ್ಲಿ ಕ್ರಿಶ್ಚಿಯನ್ ಆಗುವುದು ಎಂದರೆ ಕೇವಲ ದೇವವಾಣಿ ಮತ್ತು ಅದರ ಬಿಲೀಫ್ ಗಳನ್ನು ನಂಬುವುದು ಮಾತ್ರವೇ ಆಗಿರುತ್ತದೆ. ಕ್ಯಾಥೋಲಿಕರು ಆರ್ಥಾಡಾಕ್ಸ್ ಆಗಿರುವ ಕಾರಣಕ್ಕಾಗಿ ಅವರ ಮನುಷ್ಯ ನಿರ್ಮಿತ ಪರಂಪರೆಗಳು ತಿರಸ್ಕಾರ ಯೋಗ್ಯವಾದವು ಎನ್ನುವುದು ಪ್ರಾಟೆಸ್ಟಂಟರ ವಾದ.
ಶತಮಾನಗಳ ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟರ ಸಂಘರ್ಷದಲ್ಲಿ ಪ್ರಾಟೆಸ್ಟೆಂಟರು ಜಯಶೀಲರಾಗುತ್ತಾರೆ. ತದನಂತರ ಬಂದ ಯುರೋಪಿನ ಸೆಕ್ಯುಲರ್ ಚಿಂತಕರೆಲ್ಲ ಈ ಕ್ರಿಶ್ಚಿಯನ್ ಥಿಯಾಲಾಜಿಯ ಕಥೆಯನ್ನು ಸೆಕ್ಯುಲರ್ ಕಥೆಯನ್ನಾಗಿಸಿಬಿಡುತ್ತಾರೆ. ಆ ಕಾರಣಕ್ಕಾಗಿಯೇ ಆರ್ಥಾಡಾಕ್ಸಿ ಮತ್ತು ಪರಂಪರೆ ಎರಡೂ ಮನುಷ್ಯ ನಿರ್ಮಿತವಾಗಿರುವ ಕಾರಣಕ್ಕಾಗಿ ತಿರಸ್ಕಾರ ಯೋಗ್ಯವಾಗಿಬಿಡುತ್ತದೆ.
ಈ ಬೌದ್ಧಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಯುರೋಪಿಯನ್ನರು ಭಾರತಕ್ಕೆ ಬಂದಾಗ ಅವರಿಗೆ ಭಾರತ ದೇಶವು ಹೀದನ್ ರಿಲಿಜನ್ ಹೊಂದಿರುವ ನೇಶನ್ ಆಗಿ ಕಾಣತೊಡಗಿತು. ಜ್ಯೂಗಳ ನೇಶನ್ ಒಂದರಲ್ಲಿ ಜ್ಯೂಗಳ ಪ್ರೀಸ್ಟ್ ಗಳಿರುವಂತೆ ಮತ್ತು ಕ್ರಿಶ್ಚಿಯನ್ ರಿಲಿಜನ್ನಿನಲ್ಲಿ ಕ್ಯಾಥೋಲಿಕ್ ಪ್ರೀಸ್ಟ್ ಗಳಿರುವಂತೆ ಯುರೋಪಿನ ಪ್ರಾಟೆಸ್ಟೆಂಟರಿಗೆ ಭಾರತವೆಂಬ ಹೀದನ್ ನೇಶನ್ನಲ್ಲಿ ಬ್ರಾಹ್ಮಣರು ಪ್ರೀಸ್ಟ್ ಗಳಾಗಿ ಅವರ ಅನುಭವದ ಮೂಸೆಯಲ್ಲಿ ತೋರಿದರು.
ಇಲ್ಲಿ ಈ ಹಿಂದೆ ಗುರುತಿಸಿದ ಸಾಂಪ್ರದಾಯಿಕ ನಡುವಳಿಕೆಗಳೆಲ್ಲವೂ ರಿಲಿಜಿಯಸ್ ಆರ್ಥಾಡಾಕ್ಸಿಯಾಗಿ ಕಾಣತೊಡಗಿತು. ಅದ್ವೈತ, ದ್ವೈತ, ಬೌದ್ಧ, ಜೈನ, ಶೈವ ಇತ್ಯಾದಿ ಪರಂಪರೆಗಳು ಕೇವಲ ಆಚಾರದ ಕ್ರಮಗಳಷ್ಟೇ ಆಗಿರಲಿಲ್ಲ, ಅವು ಪುರಾತನ ಪರಂಪರೆಗಳಾಗೆದ್ದವು. ಆ ಕಾರಣಕ್ಕಾಗಿ ಅವು ಈ ಸಾಂಪ್ರದಾಯಿಕತೆಯ ಭಾಗವಾಗಿ ಕಾಣತೊಡಗಿದವು. ಹೇಗೆ ಕ್ಯಾಥೋಲಿಕರ ಆರ್ಥಾಡಾಕ್ಸಿ ರಿಲಿಜನ್ನಿನ ಭ್ರಷ್ಟತೆಯೋ ಅದೇ ರೀತಿ ಭಾರತೀಯ ಪರಂಪರೆಗಳೆಲ್ಲವೂ ಯಾವುದೋ ಒಂದು ಮೂಲ (ಸುಳ್ಳು) ರಿಲಿಜನ್ನಿನ ಭ್ರಷ್ಟ ರೂಪವಾಗಿ ಕಾಣತೊಡಗಿತು. ಇದು ಹೆಚ್ಚು ಕಡಿಮೆ ಇಂದಿಗೂ ಚಾಲ್ತಿಯಲ್ಲಿರುವ ಭಾರತದ ಕುರಿತ ನಿರೂಪಣೆ. ಈ ನಿರೂಪಣೆಗಳು ನಮ್ಮ ಬದುಕನ್ನು ವಿವರಿಸದಿದ್ದರೂ ಕೂಡ ನಮ್ಮ ಬಗ್ಗೆ ಇಂದಿಗೂ ಸತ್ಯವೆಂದು ವಿವರಿಸುವ ಕಥಾನಕವೇ ಆಗಿದೆ.
ಈಗ ನಮ್ಮ ಸಾಂಪ್ರದಾಯಿಕ ಜಗತ್ತಿನ ಕುರಿತು ಸ್ವಲ್ಪ ಯೋಚನೆ ಮಾಡೋಣ. ಸಂಪ್ರದಾಯ ಎನ್ನುವ ಶಬ್ದವು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ‘ಚೆನ್ನಾಗಿ, ಉತ್ತಮಗೊಳಿಸಿ ದಾಟಿಸುವಿಕೆ’ ಎಂಬರ್ಥವನ್ನು ಕೊಡುತ್ತದೆ. ಅಂದರೆ ಈ ಸಂಪ್ರದಾಯಗಳ ಅಸ್ತಿತ್ವ ಒಂದಲ್ಲ ಒಂದು ಪರಂಪರೆಯಲ್ಲಿನ ಆಚರಣೆಗಳನ್ನು ದಾಟಿಸುವುದನ್ನು ಅವಲಂಬಿಸಿರುತ್ತದೆ. ಈ ದಾಟಿಸುವಿಕೆ ಕೆಲವೊಮ್ಮೆ ಪಠ್ಯಗಳನ್ನು ಓದುವ ಕ್ರಮವಿರಬಹುದು, ಅಥವಾ ಒಂದು ನಿರ್ದಿಷ್ಟ ಆಚರಣೆಯನ್ನು ಮಾಡುವ ರೀತಿಯಾಗಿರಬಹುದು. ಅವನ್ನು ಕೇವಲ ದಾಟಿಸುವುದಷ್ಟೇ ಅಲ್ಲ, ಅವುಗಳನ್ನು ಇನ್ನಷ್ಟು ಚೆಂದಗೊಳಿಸಿ ಉತ್ತಮಪಡಿಸಿ ಮುಂದಿನ ತಲೆಮಾರುಗಳಿಗೆ ದಾಟಿಸುವುದು ಪರಂಪರೆಗಳಿಗೆ ಮುಖ್ಯವಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಒಂದು ತಲೆಮಾರಿನ ಅನುಭವಗಳು ಇನ್ನೊಂದು ತಲೆಮಾರಿಗೆ ನಿರಂತರ ಬದಲಾವಣೆಗೆ ಒಳಪಟ್ಟು ದಾಟಲ್ಪಡುತ್ತವೆ.
ಆ ಕಾರಣಕ್ಕಾಗಿ ಸಂಪ್ರದಾಯ ಎನ್ನುವುದು ಯಾವುದಾದರೂ ಒಂದು ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಪ್ರಕ್ರಿಯೆಯಾಗಿರುತ್ತದೆ. ಅಂದರೆ ನಮ್ಮಲ್ಲಿ ಪರಂಪರೆಗಳು ಎನ್ನುವುದು ತಲೆಮಾರುಗಳನ್ನು ಸೂಚಿಸಿದರೆ ಸಂಪ್ರದಾಯ ಎನ್ನುವುದು ದಾಟಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ನಮ್ಮಲ್ಲಿ ಸಂಪ್ರದಾಯ ಮತ್ತು ಪರಂಪರೆಗಳನ್ನು ಕೇವಲ ತರ್ಕದಿಂದ ಮಾತ್ರ ವ್ಯತ್ಯಾಸ ಮಾಡಬಹುದೇ ಹೊರತು ನಿಜವಾದ ಅರ್ಥದಲ್ಲಿ ಒಂದೇ ನಾಣ್ಯದ ಎರಡು ಮುಖಗಳು ಎನ್ನಬೇಕಾಗುತ್ತದೆ. ಅಂದರೆ ಸಂಪ್ರದಾಯವೊಂದರ ಅಸ್ತಿತ್ವಕ್ಕೆ ಪರಂಪರೆಯ ಅಸ್ತಿತ್ವ ಅನಿವಾರ್ಯವಾಗಿರುತ್ತದೆ. ನಮ್ಮಲ್ಲಿ ಅನೇಕ ಮತ-ಸಂಪ್ರದಾಯ ಮತ್ತು ಆಚಾರ ಸಂಪ್ರದಾಯದ ಕುರಿತು ಮಾತನಾಬಹುದು. ಉದಾಹರಣೆ – ದ್ವೈತ, ಅದ್ವೈತ, ಜೈನ ಬೌದ್ಧ ಇವು ನಿರ್ದಿಷ್ಟ ಮತದ ಸಂಪ್ರದಾಯಗಳಾದರೆ, ಜಾತಿ, ಕುಲಗಳು ಆಚಾರವನ್ನು ದಾಟಿಸುವ ಸಂಪ್ರದಾಯಗಳಾಗಿವೆ. ಆ ಕಾರಣಕ್ಕಾಗಿ ಭಾರತೀಯ ಪರಂಪರೆಗಳಲ್ಲಿ ಸಂಪ್ರದಾಯಗಳು ಆಚರಣೆಯಲ್ಲಿಯೇ ಅಸ್ತಿತ್ವ ಹೊಂದಿರುತ್ತವೆ ಮತ್ತು ಅವು ಯಾವುದಾದರೊಂದು ಪರಂಪರೆಗೆ ಸೇರಿರುತ್ತವೆ. ಒಬ್ಬ ವ್ಯಕ್ತಿ ಅನೇಕ ಸಂಪ್ರದಾಯಕ್ಕೆ ಏಕ ಕಾಲದಲ್ಲಿ ಸೇರಬಹುದಾಗಿರುತ್ತದೆ. ಸಂಪ್ರದಾಯವೊಂದು ನಿರಂತರವಾಗಿ ಚೆನ್ನಾಗಿ, ಉತ್ತಮಗೊಳಿಸಿ ಮುಂದಿನ ತಲೆಮಾರುಗಳಿಗೆ ದಾಟಿಸುವ ಪ್ರಕ್ರಿಯೆಯಲ್ಲಿ ಇರುವ ಕಾರಣಕ್ಕಾಗಿ ನಿರಂತರ ದೇಶ-ಕಾಲಗಳ ಸವಾಲುಗಳಿಗೆ ಅನುಗುಣವಾಗಿ ಮಾರ್ಪಾಡು ಹೊಂದುತ್ತದೆ. ಸಂಪ್ರದಾಯಗಳಲ್ಲಿ ಆಚಾರವನ್ನು ಹೀಗೆಯೇ ಮಾಡಬೇಕೆಂಬ ಆಗ್ರಹವಿದ್ದರೂ ಕೂಡ ಇವು ಪ್ರತಿತಲೆಮಾರಿನಲ್ಲೂ ಮಾರ್ಪಾಡು ಹೊಂದುವುದು ಅದರ ಮುಖ್ಯ ಗುಣವಾಗಿರುತ್ತದೆ. ಸಂಪ್ರದಾಯಗಳು ಮತ್ತು ಪರಂಪರೆಗಳು ಶ್ರದ್ಧೆಯ ಆಧಾರದ ಮೇಲೆ ನಡೆಯುತ್ತವೆ. ಆದರೆ ಈ ಶ್ರದ್ಧೆ ಯಾವುದೇ ಬಿಲೀಫ್ ನ ಮೇಲೆ ನಿಂತಿರುವುದಿಲ್ಲ. ಬದಲಿಗೆ ಈ ಮೇಲೆ ಹೇಳಿದ ಅನುಭವ, ಆಚರಿಸುವಿಕೆ ಮತ್ತು ದಾಟಿಸುವಿಕೆಗೆ ಸಂಬಂಧಿಸಿದ್ದಾಗಿರುತ್ತದೆ.
ಈಗ ಸಂಪ್ರದಾಯವೇಕೆ ನಮ್ಮ ಜನರಿಗೆ ಕೆಟ್ಟದ್ದಾಗಿ ಕಾಣಿಸುತ್ತದೆ ಎಂದರೆ, ಇದು ಯುರೋಪಿನ ಅನುಭವದ ಕಾರಣಕ್ಕಾಗಿ ಎಂದು ಹೇಳಲೇಬೇಕಾಗುತ್ತದೆ. ಅಂದರೆ ಸಂಪ್ರದಾಯ ಮತ್ತು ಪರಂಪರೆಗಳು ನಮಗೆ ಆನಂದದ ಮಾರ್ಗವಾಗಿರುವುದು ಅನುಭವವೇದ್ಯವಾದರೂ ಇಲ್ಲಿ ಈ ಮೇಲೆ ಚರ್ಚಿಸಿದಂತೆ ಹಗ್ಗವನ್ನು ಹಾವೆಂದು ಭಾವಿಸಿರುವ ಅಧ್ಯಾಸದ ಕಾರಣಕ್ಕಾಗಿ ಸಂಪ್ರದಾಯ ಮತ್ತು ಪರಂಪರೆಗಳನ್ನು ಯುರೋಪಿನ ರಿಲಿಜಿಯಸ್ ಚೌಕಟ್ಟಿನಲ್ಲಿ ನೋಡಿದಾಗ ಅವುಗಳು ತಿರಸ್ಕಾರ ಯೋಗ್ಯವಾಗಿ ಬಿಡುತ್ತವೆ. ಇಂದು ನಮಗೆ ಆನಂದದ ಮಾರ್ಗವು ಬೇಕಾಗಿದ್ದರೆ, ಈ ಮಾಯೆಯಿಂದ ಹೊರಬಂದು ಸಂಪ್ರದಾಯ ಮತ್ತು ಪರಂಪರೆಗಳ ಭಾಗವಾಗುವುದೇ ನಮ್ಮ ಮುಂದಿರುವ ದಾರಿ ಎಂದು ಸ್ಪಷ್ಟವಾಗಿ ಗ್ರಹಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ವಸಾಹಾತುಪ್ರಜ್ಞೆಯೆಂಬ ಮಾಯೆಯ ಸುಳಿಯಲ್ಲಿ ಸಿಲುಕಿ ಅನುಭವವನ್ನು ಬಿಟ್ಟು ಅಸಂತೋಷವನ್ನು ಸ್ವಾಗತಿಸಿದಂತಾಗುತ್ತದೆ.

Prof. M.S. Chaitra
Prof. M.S. Chaitra is a distinguished scholar, director, and senior fellow at the Foundation for the Study of Indian Culture (FSIC), a division of the Samhati Foundation, Bengaluru. He is also an Associate Professor at the University of Trans-Disciplinary Health Sciences and Technology (TDU), Bengaluru. His academic trajectory is marked by a unique transdisciplinary approach, bridging the rigor of science with the insights of Indian intellectual traditions. Chaitra's early career involved significant research contributions at esteemed institutions, including the Wildlife Institute of India, Dehradun, and the Centre for Ecological Sciences (CES), Indian Institute of Science (IISc).


