• Home  
  • ಹಸಿವಾದೊಡೆ ಭಿಕ್ಷಾನ್ನಗಳುಂಟು…
- Articles - ದಾರಿ ತಪ್ಪಿದ ಸಂಸ್ಕೃತಿ ಚಿಂತನೆ

ಹಸಿವಾದೊಡೆ ಭಿಕ್ಷಾನ್ನಗಳುಂಟು…

ಮಹಾಭಾರತದ ಅಂತ್ಯದಲ್ಲಿ ಪಾಂಡವರು ರಾಜ್ಯವನ್ನು ಗೆದ್ದು ಅಶ್ವಮೇಧಯಾಗವನ್ನು ಮಾಡುತ್ತಾರೆ. ಇಂಥ ನಭೂತೋ ನ ಭವಿಷ್ಯತಿ ಎಂಬಂಥ ಯಾಗವನ್ನು ಮಾಡಿ ಅಪರಿಮಿತ ಪುಣ್ಯವನ್ನು ಸಂಪಾದಿಸಿದೆವು ಎಂದು ಅವರು ಬೀಗುತ್ತಿರುವಾಗ ಅಲ್ಲಿಗೆ ಒಂದು ಅರ್ಧ ಮೈ ಬಂಗಾರವಾಗಿರುವ ಮುಂಗುಸಿಯೊಂದು ಬರುತ್ತದೆ. ಈ ಕೌತುಕ ಏನೆಂದು ವಿಚಾರಿಸಿದರು. ಭಿಕ್ಷೆ ಎತ್ತಿ ಜೀವಿಸುತ್ತಿದ್ದ ಬ್ರಾಹ್ಮಣನ ಕುಟುಂಬವೊಂದು ತಮ್ಮಪಾಲಿನ ಎಲ್ಲ ಹಿಟ್ಟನ್ನು ಹಸಿದು ಬಂದವನೊಬ್ಬನಿಗೆ ದಾನ ಮಾಡಿದ್ದನ್ನು ನೋಡಿದ್ದರಿಂದ ಅದರ ಮೈ ಅರ್ಧ ಬಂಗಾರವಾಗಿತ್ತು. ಪಾಂಡವರ ಅಶ್ವಮೇಧಯಾಗದಂಥ ಪುಣ್ಯ ಪ್ರಸಂಗಕ್ಕೆ ಸಾಕ್ಷಿಯಾದರೆ ತನ್ನ ಮತ್ತರ್ಧ […]

ಮಹಾಭಾರತದ ಅಂತ್ಯದಲ್ಲಿ ಪಾಂಡವರು ರಾಜ್ಯವನ್ನು ಗೆದ್ದು ಅಶ್ವಮೇಧಯಾಗವನ್ನು ಮಾಡುತ್ತಾರೆ. ಇಂಥ ನಭೂತೋ ನ ಭವಿಷ್ಯತಿ ಎಂಬಂಥ ಯಾಗವನ್ನು ಮಾಡಿ ಅಪರಿಮಿತ ಪುಣ್ಯವನ್ನು ಸಂಪಾದಿಸಿದೆವು ಎಂದು ಅವರು ಬೀಗುತ್ತಿರುವಾಗ ಅಲ್ಲಿಗೆ ಒಂದು ಅರ್ಧ ಮೈ ಬಂಗಾರವಾಗಿರುವ ಮುಂಗುಸಿಯೊಂದು ಬರುತ್ತದೆ. ಈ ಕೌತುಕ ಏನೆಂದು ವಿಚಾರಿಸಿದರು. ಭಿಕ್ಷೆ ಎತ್ತಿ ಜೀವಿಸುತ್ತಿದ್ದ ಬ್ರಾಹ್ಮಣನ ಕುಟುಂಬವೊಂದು ತಮ್ಮಪಾಲಿನ ಎಲ್ಲ ಹಿಟ್ಟನ್ನು ಹಸಿದು ಬಂದವನೊಬ್ಬನಿಗೆ ದಾನ ಮಾಡಿದ್ದನ್ನು ನೋಡಿದ್ದರಿಂದ ಅದರ ಮೈ ಅರ್ಧ ಬಂಗಾರವಾಗಿತ್ತು. ಪಾಂಡವರ ಅಶ್ವಮೇಧಯಾಗದಂಥ ಪುಣ್ಯ ಪ್ರಸಂಗಕ್ಕೆ ಸಾಕ್ಷಿಯಾದರೆ ತನ್ನ ಮತ್ತರ್ಧ ಮೈ ಕೂಡ ಬಂಗಾರವಾಗುವುದರಲ್ಲಿ ಸಂದೇಹವಿಲ್ಲ ಎಂದು ಭಾವಿಸಿ ಅದು ಅಲ್ಲಿಗೆ ಬಂದಿತ್ತು. ಆದರೆ ಅದನ್ನು ವೀಕ್ಷಿಸಿಯೂ ಉಳಿದರ್ಧ ಮೈ ಬಂಗಾರವಾಗಲೇ ಇಲ್ಲ. ಅಂದರೆ ಹಸಿದವನಿಗೆ ಅನ್ನದಾನವು ಅಶ್ವಮೇಧಯಾಗಕ್ಕಿಂತಲೂ ಮಿಗಿಲು ಎಂಬುದಾಗಿ ಕಥೆ ಸೂಚಿಸುತ್ತದೆ.

ಇದು ಕೇವಲ ಕಥೆಯಲ್ಲ. ಭಾರತೀಯರ ಜೀವನಕ್ರಮವೊಂದರ ಕುರಿತು ಈ ಕಥೆ ತಿಳಿಸುತ್ತದೆ. ಭಾರತೀಯ ಸಾಂಪ್ರದಾಯಿಕ ಕೃಷಿ ಕುಟುಂಬವೊಂದು ಆಲದಮರವಿದ್ದ ಹಾಗೆ. ತನ್ನ ಸುತ್ತಲಿನ ಅನೇಕ ಕೃಷಿಯೇತರ ಸಮುದಾಯಗಳನ್ನು ಅದು ಸಲಹುತ್ತಿರುತ್ತದೆ. ವರ್ಷವಿಡೀ ಮನೆಗೆ ಅನೇಕ ರೀತಿಯ ಜನರು ಅತಿಥಿಗಳಾಗಿ, ಭಿಕ್ಷಾರ್ಥಿಗಳಾಗಿ ಬರುತ್ತಿರುತ್ತಾರೆ. ನಾನು ಚಿಕ್ಕವನಿದ್ದಾಗ ನಮ್ಮ ಮನೆಗೆ ಭಿಕ್ಷೆಬೇಡುವವರು, ಹಾವುಗೊಲ್ಲರು, ಜೋಗೇರು, ಮೈಲಾರಲಿಂಗ, ಸುಡುಗಾಡು ಸಿದ್ಧರು, ವೇಷಧಾರಿಗಳು, ಮುಂತಾದ ಮುಂಬಾಗಿಲಿನ ಅಂಗಳದ ಅತಿಥಿಗಳು ಸದಾ ಇರುತ್ತಿದ್ದರು. ಇದು ಭಿಕ್ಷಾಟನೆಯನ್ನಾಧರಿಸಿಯೇ ತಮ್ಮ ಬದುಕು ಸಾಗಿಸುತ್ತಿದ್ದ ಸಮುದಾಯ. ಇಂಥವರಿಗೆ ಅಕ್ಕಿ, ಅಡಕೆ, ಹಳೆಯ ಬಟ್ಟೆ ಇತ್ಯಾದಿಗಳನ್ನು ನೀಡಿ ಕಳುಹಿಸಲಾಗುತ್ತಿತ್ತು. ಕೆಲವೊಮ್ಮೆ ಅವರು ಬಹಳ ಕಾಡಿದರೆ ಬಯ್ದು ಓಡಿಸುವುದೂ ಇತ್ತು.

ಜಗುಲಿಯ ಅತಿಥಿಗಳಾಗಿ ಬರುತ್ತಿದ್ದವರಲ್ಲಿ ವಂತಿಗೆ ವಸೂಲುಮಾಡುವವರು, ಸಂಭಾವನೆ ಭಟ್ಟರು, ಊರಿಗೆ ಬಂದ ಯಕ್ಷಗಾನ, ನಾಟಕ ಇತ್ಯಾದಿ ಕಲಾವಿದರು. ಊರಿಗೆ ಹೊಸದಾಗಿ ಬಂದ ಸರ್ಕಾರಿ ನೌಕರರು, ಹೀಗೆ ಉದ್ದ ಪಟ್ಟಿಯೇ ಇದೆ. ಜಗುಲಿಯ ಅತಿಥಿಗಳಿಗೆ ಕನಿಷ್ಠ ಒಂದು ಚಹ/ಕಷಾಯ ಅಥವಾ ಉಪಹಾರಗಳ ಉಪಚಾರ ಇರಲೇಬೇಕು. ಕೆಲವರು ಊಟಕ್ಕೆ ಕೂಡ ಇರುತ್ತಿದ್ದರು. ಕೆಲವರು ಒಂದೆರಡು ದಿನ ತಮ್ಮ ಕಾರ್ಯ ಮುಗಿಯುವವರೆಗೆ ಇರುತ್ತಿದ್ದರು. ನಮ್ಮ ಹಳ್ಳಿಯ ಶಾಲೆ ಹೊಸದಾಗಿ ಪ್ರಾರಂಭವಾದಾಗ ಅಲ್ಲಿಯ ಶಿಕ್ಷಕರ ಕುಟುಂಬವೇ ಕೆಲವು ವರ್ಷಗಳ ವರೆಗೆ ನಮ್ಮ ಮನೆಯಲ್ಲಿ ಇತ್ತು. ನಮ್ಮ ಹಳ್ಳಿಯಲ್ಲಿ ಸರ್ಕಾರವು ಪ್ರವೇಶಿಸಿದಾಗ ಅದರ ನೌಕರರೂ ನಮ್ಮ ಕುಟುಂಬದ ಖಾಯಂ ಅತಿಥಿಗಳಾದರು. ಜೊತೆಗೆ ಶಾಲೆಗೆ ದೂರವಿದ್ದ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಓದಿಸುವುದು ಕೂಡ ಇತ್ತು. ಇದು ನಮ್ಮ ಊರಿನ ಉಳಿದ ಕುಟುಂಬಗಳ, ಹಾಗೂ ಭಾರತೀಯ ಸ್ಥಿತಿವಂತ ಕೃಷಿಕುಟುಂಬಗಳ ಕಥೆಯೇ ಆಗಿದೆ.

ಬಹುಶಃ ಭಾರತೀಯ ಕುಟುಂಬವೊಂದು ಪೋಷಿಸಿಕೊಂಡು ಬಂದ ಈ ಮೇಲಿನ ಎಲ್ಲ ಪ್ರಕಾರದ ಚಟುವಟಿಕೆಗಳೂ ಈ ಸಂಸ್ಕೃತಿಯು ಅನ್ನದಾನಕ್ಕೆ ನೀಡಿದ ಮಹತ್ವದ ಬೇರೆ ಬೇರೆ ಮುಖಗಳಾಗಿವೆ. ಇಂಥವರಲ್ಲದೇ ಭಾರತೀಯ ಇತಿಹಾಸದ ತುಂಬೆಲ್ಲ ಭಿಕ್ಷಾಟನೆಯನ್ನೇ ನೆಚ್ಚಿಕೊಂಡ ಅನೇಕ ಅಧ್ಯಾತ್ಮ ಸಂಪ್ರದಾಯಗಳೂ ಇದ್ದವು. ಅವುಗಳನ್ನು ಪೋಷಿಸಿದ್ದೇ ಭಾರತೀಯ ಕುಟುಂಬಗಳು. ಬಹುಶಃ ಒಂದು ದೇಶದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ವೈವಿಧ್ಯಪೂರ್ಣ ಸಮುದಾಯಗಳನ್ನು ಅಲ್ಲಿನ ಗೃಹಸ್ಥರೇ ಧರ್ಮ ಶ್ರದ್ದೆಯಿಂದ ಪೋಷಿಸಿಕೊಂಡು ಬಂದ ಮತ್ತೊಂದು ಉದಾಹರಣೆ ಪ್ರಪಂಚದಲ್ಲಿ ಇರಲಿಕ್ಕಿಲ್ಲ.

ಭಾರತೀಯ ಸಂಸ್ಕೃತಿಯಲ್ಲಿ ಅನ್ನದಾನವೆಂಬುದು ಸಮುದಾಯ ಜೀವನದ ತಳಪಾಯವಾಗಿದೆ. ಹಾಗೂ ಅದೊಂದು ಪುಣ್ಯ ಕಾರ್ಯ ಎಂದು ಕೂಡ ಭಾರತೀಯರು ಭಾವಿಸುತ್ತಾರೆ. ವರ್ಷದಲ್ಲಿ ಒಂದೆರಡು ಬಾರಿ ವಿಶೇಷ ಸಮಾರಂಭವನ್ನು ಏರ್ಪಡಿಸಿ ತಮ್ಮ ನೆಂಟರಿಗೆಲ್ಲ ಭೋಜನವನ್ನು ಹಾಕುವುದು ಸಾಂಪ್ರದಾಯಿಕ ಕುಟುಂಬಗಳಿಗೆ ಕಡ್ಡಾಯ. ಜೊತೆಗೇ ಅದು ಯಾವುದೇ ವಿಶೇಷ ಕಾರ್ಯಕ್ರಮವಿರಲಿ, ಮದುವೆ, ಮುಂಜಿ, ಚೌಳ, ಇತ್ಯಾದಿಗಳಲ್ಲಿ ಆಹ್ವಾನಿತರಿಗೆ ಊಟಮಾಡಿಸುವುದು ಮುಖ್ಯ. ಬ್ರಾಹ್ಮಣರಂತೂ ಈ ಸಲುವಾಗಿ ಪಾಕಕಲೆಯನ್ನು ಉತ್ಕೃಷ್ಟ ಹಂತಕ್ಕೇರಿಸಿ ಖ್ಯಾತಿಗಳಿಸಿದ್ದಾರೆ. ಕೌಟುಂಬಿಕ ಹಂತದಿಂದ ಹೊರಬಂದು ಸಾರ್ವಜನಿಕ ಜೀವನವನ್ನು ರೂಪಿಸಿಕೊಳ್ಳುವಾಗಲೂ ಕೂಡ ಅನ್ನದಾನದ ಕಲ್ಪನೆಯು ಪ್ರಧಾನವಾಗುತ್ತದೆ. ನಮ್ಮ ಹಳ್ಳಿಗಳ ದೇವಾಲಯಗಳಲ್ಲಿ ವರ್ಷವಿಡೀ ಯಾವ್ಯಾವುದೋ ಪೂಜೆಗಳು, ಹಬ್ಬಗಳು, ಜಾತ್ರೆ ಹಾಗೂ ಉತ್ಸವಗಳ ನೆಪದಲ್ಲಿ ಊರಿಗೆಲ್ಲ ಪ್ರಸಾದ ಹಾಗೂ ಊಟದ ವಿತರಣೆ ನಡೆಯುತ್ತದೆ. ಅಷ್ಟೊಂದೇ ಅಲ್ಲ ನಾವು ನಮ್ಮ ಸರ್ಕಾರಿ ಕಛೇರಿಗಳನ್ನು ಹಾಗೂ ಸಂಸ್ಥೆಗಳನ್ನು ಕೂಡ ಇದಕ್ಕೆ ಒಗ್ಗಿಸಿಕೊಂಡಿದ್ದೇವೆ. ನಮ್ಮ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವರ್ಷಪೂರ್ತಿ ನಡೆಯುವ ಸೆಮಿನಾರು, ಉಪನ್ಯಾಸ, ಸಮ್ಮೇಳನಗಳು ಇತ್ಯಾದಿಗಳಲ್ಲೂ ಕೂಡ ಊಟವೇ ಮುಖ್ಯ ಸಂಬಂಧವಿರಲಿ. ಇಲ್ಲದಿರಲಿ ಬಂದವರಿಗೆ ಊಟ ಇಲ್ಲವೆನ್ನುವಂತಿಲ್ಲ, ಅಂಥ ಕಾರ್ಯಕ್ರಮಗಳ ಯಶಸ್ಸು ಕೊನೆಗೂ ಊಟದ ವ್ಯವಸ್ಥೆಯನ್ನೇ ಅವಲಂಬಿಸಿದೆ. ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನಗಳ ಕುರಿತು ಮಾಧ್ಯಮ ವರದಿಗಳನ್ನು ಓದಿದರೆ ಈ ಕುರಿತು ಸಂದೇಹ ಉಳಿಯಲಾರದು.

ಇತಿಹಾಸ ಕಾಲದಲ್ಲಿ ರಾಜರು ಹಾಗೂ ಶ್ರೀಮಂತರು ಅನ್ನ ಸತ್ರಗಳನ್ನು ನಡೆಸಲು ದಾನಗಳನ್ನು ನೀಡುತ್ತಿದ್ದರು. ಭಾರತದ ತುಂಬೆಲ್ಲ ಇರುವ ಹಿಂದಿನ ಕಾಲದ ಶಾಸನಗಳು ಇಂಥ ಅಸಂಖ್ಯ ದಾನಗಳನ್ನು ದಾಖಲಿಸುತ್ತವೆ. ಹಳ್ಳಿಗಳ ಕಂದಾಯದಲ್ಲಿ ಅಥವಾ ಕೃಷಿಭೂಮಿಯಲ್ಲಿ ಒಂದು ಭಾಗವನ್ನು ಅನ್ನ ಸತ್ರಗಳಿಗೆ ದಾನವಾಗಿ ನೀಡಲಾಗುತ್ತಿತ್ತು. ಇಂಥ ಅನ್ನ ಸತ್ರಗಳು ದೇವಾಲಯ ಅಥವಾ ಮಠಗಳ ಒಂದು ಭಾಗವಾಗಿದ್ದು ಅಂಥ ಸ್ಥಳಗಳಲ್ಲಿ ಶಿಕ್ಷಣಕೇಂದ್ರಗಳೂ ಇರುತ್ತಿದ್ದವು. ದಾರಿಹೋಕರು, ಅನಾಥರು, ಭಿಕ್ಷುಕರು, ವಿದ್ಯಾರ್ಥಿಗಳು, ಸನ್ಯಾಸಿಗಳು ಇತ್ಯಾದಿ ನಾನಾ ವರ್ಗಗಳು ಇಂಥ ಸತ್ರಗಳಲ್ಲಿ ಊಟಮಾಡುತ್ತಿದ್ದರು. ಭಾರತದಲ್ಲಿ ವಸಾಹತು ಆಡಳಿತವು ಪ್ರಾರಂಭವಾದ ನಂತರ ಇವೆಲ್ಲ ನಿಂತುಹೋದವು. ಆದರೆ ಅನ್ನದಾನವು ಖಾಸಗಿ ಸಂಸ್ಥೆಗಳಿಂದ ಮುಂದುವರಿಯುತ್ತಿದೆ. ದಕ್ಷಿಣ ಭಾರತದಲ್ಲಿ ಸುಪ್ರಸಿದ್ಧ ದೇವಾಲಯಗಳು, ತೀರ್ಥಕ್ಷೇತ್ರಗಳು, ಮಠಗಳು, ಆಶ್ರಮಗಳು ಮುಂತಾದ ಸ್ಥಳಗಳಲ್ಲಿ ದಿನನಿತ್ಯ ಬಂದವರಿಗೆಲ್ಲ ಊಟ ನೀಡುವ ಪದ್ಧತಿ ಇಂದೂ ಕೂಡ ಸಾಮಾನ್ಯ ಭಕ್ತಾದಿಗಳ ಕಾಣಿಕೆಯಿಂದ ಆ ವ್ಯವಸ್ಥೆ ಮಾಡಿರುತ್ತಾರೆ.

ಅನ್ನದಾನಕ್ಕೆ ಇಂಥ ಮಹತ್ವವನ್ನು ನೀಡಿದ ಸಂಸ್ಕೃತಿಯಲ್ಲಿ ಅನ್ನವನ್ನು ದುಡ್ಡಿಗೆ ಮಾರುವುದು ಕೂಡ ಅಷ್ಟೇ ಖಂಡನೀಯ ಎನಿಸಿಕೊಳ್ಳುತ್ತದೆ. ಹೋಟೆಲ್ ಉದ್ಯಮವು ಭಾರತೀಯ ಮೂಲದ್ದಲ್ಲ, ಅದನ್ನು ಆಧುನಿಕ ಕಾಲದಲ್ಲಿ ಕೆಲವು ಬ್ರಾಹ್ಮಣರು ಪ್ರಾರಂಭಿಸುವಾಗ ಅದು ಅನ್ನದ ಮಾರಾಟ ಎಂಬ ಕಾರಣದಿಂದ ಕೆಲವೆಡೆ ಅವರ ಸಮುದಾಯದಿಂದ ಕಟು ಟೀಕೆಗಳು ಎದ್ದಿದ್ದವು. ಅದೇ ರೀತಿ ಊಟಕ್ಕೆ ಕುಳಿತವನನ್ನು ಎಬ್ಬಿಸುವುದು, ಹಸಿದವನಿಗೆ ಊಟ ಹಾಕದೇ ಕಳುಹಿಸುವುದು ಮಹಾಪಾಪ ಎಂಬುದಾಗಿ ಕೂಡ ಹೇಳಲಾಗುತ್ತದೆ. ಇವೆಲ್ಲ ಸಂಪ್ರದಾಯಸ್ಥರ ಲೋಕ, ಇಂದಿನ ಪ್ರಗತಿಪರರಿಗೆ ನಮ್ಮ ದೇವಾಲಯಗಳಲ್ಲಿ ದಿನನಿತ್ಯ ನಡೆಯುವ ಅನ್ನ ಸಂತರ್ಪಣೆಯು ಕೌತುಕವನ್ನು ಹುಟ್ಟಿಸುವ ಬದಲಾಗಿ ಅಲ್ಲಿ ನಡೆಯುವ ಪಂಕ್ತಿಭೇದದಿಂದಾಗಿ ಅದು ಹಿಂದೂಗಳ ಅನಿಷ್ಟ ಪದ್ಧತಿಯಾಗಿ ಕಾಣಿಸುತ್ತದೆ. ಇದರ ಜೊತೆಗೆ ಆಧುನಿಕ ಜಗತ್ತಿನ ಒಂದು ಭಾಗವಾಗುತ್ತಿರುವ ಭಾರತೀಯ ಕುಟುಂಬಗಳಲ್ಲೂ ಈ ಹಳೆಯ ಆಚರಣೆಗಳು ಮಾಯವಾಗತೊಡಗಿವೆ. ಜಗತ್ತಿನ ಬೇರೆ ಯಾವುದೇ ಸಂಸ್ಕೃತಿಯೂ ಇಂಥದ್ದೊಂದು ಆಚರಣೆಯನ್ನು ರೂಪಿಸಿ ಪೋಷಿಸಿಕೊಂಡು ಬಂದಂತೆ ಕಾಣಿಸುವುದಿಲ್ಲ. ಧನ ಧಾನ್ಯ ಸಂಗ್ರಹವಾದಂತೆಲ್ಲ ಇಲ್ಲಿನ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಅನ್ನದಾನವನ್ನು ಮಾಡಿದರೆ ಅದರ ಸದ್ವಿನಿಯೋಗವಾಗುತ್ತದೆ ಎಂದು ಭಾವಿಸುವುದರಿಂದಲೇ ಇಂಥ ಆಚರಣೆಗಳು ಚಾಲ್ತಿಯಲ್ಲಿವೆ. ಹಾಗೂ ಇಂಥ ಆಚರಣೆಗಳನ್ನು ಆಧರಿಸಿ ಕೇವಲ ಭಿಕ್ಷುಕರೊಂದೇ ಅಲ್ಲ, ಇಂದು ನಾವು ಭಿಕ್ಷುಗಳು, ಶ್ರಮಣರು, ಸನ್ಯಾಸಿಗಳು, ಶಿವಶರಣರು, ದಾಸರು ಅಂತೆಲ್ಲ ಯಾವುದನ್ನು ಭಾರತೀಯ ಅಧ್ಯಾತ್ಮ ಸಂಪ್ರದಾಯಗಳುಎನ್ನುತ್ತೇವೋ ಅವರನ್ನೆಲ್ಲ ಪೋಷಿಸಿದ್ದೇ ಭಾರತೀಯರ ಇಂಥ ಸಂಪ್ರದಾಯ.

Subscribe For Newsletter

    About Us

    The Samhati Foundation established the Foundation for the Study of Indian Culture (FSIC: https://fsic.in/) a research division dedicated to the scientific study of Indian culture and traditions..

    Email Us: director@fsic.in

    Samhati  @2026. All Rights Reserved.

    Discover more from Samhati

    Subscribe now to keep reading and get access to the full archive.

    Continue reading