ಭಾರತೀಯ ಸಂಸ್ಕೃತಿಯ ಕುರಿತು ಭಾರತೀಯರು ಇಂದು ತಮ್ಮ ನಡುವೆ ಮಾತನಾಡಿಕೊಳ್ಳುವ ರೀತಿ ಅತ್ಯಂತ ವಿಚಿತ್ರವಾಗಿ ಕಾಣುತ್ತದೆ. ಕೆಲವರು ತಮ್ಮ ಪೂರ್ವಜರ ಆಚಾರ-ವಿಚಾರಗಳನ್ನೆಲ್ಲ ಅತ್ಯಂತ ರಮಣೀಯವೆಂದು ಹಾಗೂ ಇಲ್ಲಿ ಇದ್ದಿದ್ದೆಲ್ಲವೂ ಅದ್ಭುತವಾಗಿದ್ದೆಂದು ವಿವರಿಸಿಕೊಂಡರೆ, ಇನ್ನು ಕೆಲವರು ಇಲ್ಲಿರುವುದೆಲ್ಲವೂ ಉಪಯೋಗವಿಲ್ಲದ್ದೆನ್ನುವಂತೆ ಮಾತನಾಡುತ್ತಾರೆ. ಆದರೆ ಈ ಎರಡೂ ನಿರೂಪಣೆಗಳು ನಮ್ಮ ಸಾಂಸ್ಕೃತಿಕ ಅನುಭವವಲ್ಲ ಬದಲಿಗೆ ಕಳೆದ ಎರಡು ಶತಮಾನಕ್ಕೂ ಕಾಲ ಪಶ್ಚಿಮವು ಭಾರತದ ಕುರಿತು ಕಟ್ಟಿಕೊಟ್ಟ ಚಿತ್ರಣ. ಈ ನಿರೂಪಣೆಗಳಲ್ಲಿ ಕೆಲವರಿಗೆ ಭಾರತ ಅದ್ಭುತವಾಗಿ ಕಂಡರೆ ಮತ್ತೆ ಕೆಲವರಿಗೆ ನಿಕೃಷ್ಟವಾಗಿ ಕಂಡಿತು. ಈ ಎರಡೂ ನಿರೂಪಣೆಗಳು ಭಾರತದ ಜನರ ಬದುಕಿನ ಕುರಿತು ನಮಗೆ ಯಾವ ತಿಳಿವಳಿಕೆಯನ್ನು ನೀಡಬಲ್ಲವು ಎನ್ನುವುದು ಅತ್ಯಂತ ಪ್ರಶ್ನಾರ್ಹ.
ಒಂದರ್ಥದಲ್ಲಿ ಈ ನಿರೂಪಣೆಗಳನ್ನು ಆಧರಿಸಿ ಭಾರತೀಯ ಸಾಂಸ್ಕೃತಿಕ ಬದುಕಿನ ಪ್ರಸ್ತುತತೆಯ ಬಗ್ಗೆ ಹಲವು ಬಾರಿ ಚಿಂತಕರು ಪ್ರಶ್ನೆಗಳನ್ನು ಎತ್ತುತ್ತಾರೆ. ಒಂದು ಕಡೆ ನಮ್ಮ ಜೀವನದ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಸಮಜಾಯಿಷಿ ಕೊಡುವುದು ಹೇಗೆ ಎಂದು ಯೋಚಿಸುತಿರುತ್ತೇವೆ. ಮತ್ತೊಂದೆಡೆ ನಮ್ಮ ಪಾರಂಪರಿಕ ಬದುಕು ನೆಮ್ಮದಿಯನ್ನು ಕೊಡುತ್ತದೆ ಎಂದು ಕಂಡುಕೊಂಡಿರುತ್ತವೆ. ಆದರೂ ಈ ಅನುಭವಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅನೇಕ ಸಮಸ್ಯೆಗಳಿವೆ. ಈ ರೀತಿಯ ಗೊಂದಲಮಯ ಸ್ಥಿತಿಗೆ ನಾವು ಬಂದು ತಲುಪಲು ಕಾರಣವೇನು ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಹಾವು-ಹಗ್ಗದ (ರಜ್ಜು-ಸರ್ಪ ನ್ಯಾಯದ) ನಿರೂಪಣೆಯನ್ನು ಇಟ್ಟುಕೊಂಡು ಈ ಮೇಲೆ ಗುರುತಿಸಿದ ಸಮಸ್ಯೆಗಳನ್ನು ವಿಮರ್ಶೆಗೆ ಒಳಪಡಿಸಿದರೆ ಹಲವು ಸಂಗತಿಗಳು ಸ್ಪಷ್ಟವಾಗುತ್ತವೆ. ಅಂದರೆ ಕಳೆದ ಇನ್ನೂರು ವರ್ಷದಲ್ಲಿ ಭಾರತಕ್ಕೆ ಆಗಮಿಸಿದ ಯುರೋಪಿಯನ್ನರು ಭಾರತದ ಕುರಿತು ಹಾವು ಎನ್ನುವ ನಿರೂಪಣೆಯನ್ನು ನೀಡಲು ಪ್ರಾರಂಭಿಸಿದರು. ನಂತರ ಅದೇ ನಿರೂಪಣೆಯನ್ನು ಮುಂದುವರಿಸಿ ನಮ್ಮ ಶೈಕ್ಷಣಿಕ ಸಮುದಾಯದಲ್ಲಿ ಇಂದಿನವರೆಗೂ ಹಗ್ಗದ ಕುರಿತು (ಅಂದರೆ ಭಾರತದ ಕುರಿತು) ಮಾತನಾಡುವಾಗಲೆಲ್ಲ ಹಾವಿನ ನಿರೂಪಣೆಯನ್ನೇ (ಯುರೋಪಿಯನ್ನರ ನಿರೂಪಣೆಯನ್ನೇ) ಮುಂದುವರಿಸಲಾಗಿದೆ. ಹಾಗಾದ ಪಕ್ಷದಲ್ಲಿ ಹಗ್ಗದ ಕುರಿತಾದ ಹಾವೆಂಬ ನಿರೂಪಣೆಯು ಹಗ್ಗದ ಕುರಿತು ಯಾವ ತಿಳಿವಳಿಕೆಯನ್ನು ಕೊಡುವುದಿಲ್ಲ. ಬದಲಿಗೆ ಹಗ್ಗವನ್ನು ಹಾವೆಂದು ಅನುಭವಿಸಿದ ವ್ಯಕ್ತಿಯ ಕುರಿತು ಹೆಚ್ಚಿನ ತಿಳಿವಳಿಕೆಯನ್ನು ಕೊಡುತ್ತದೆ. ಇದನ್ನೆ ಶಂಕರ ಭಗವತ್ಪಾದರು ಅಧ್ಯಾಸವೆಂದು ಕರೆದಿದ್ದಾರೆ. ಹಾಗೆಂದ ತಕ್ಷಣ ಅನೇಕರು ನಾವು ನಮ್ಮ ಆಚಾರಗಳಿಗೆ ನಿಷ್ಠರಾಗಿದ್ದೇವೆ, ಹಾಗಾಗಿ ಈ ಹಾವಿನ ನಿರೂಪಣೆಗಳೊಳಗೆ ಸಿಕ್ಕಿ ಹಾಕಿಕೊಂಡಿಲ್ಲ, ಬದಲಿಗೆ ನಾವು ಭಾರತವನ್ನು ಸರಿಯಾಗಿಯೇ ಗ್ರಹಿಸಿದ್ದೇವೆ ಎಂದು ವಾದಿಸುತ್ತಾರೆ. ಆದರೆ ಆ ರೀತಿಯ ವಿವರಣೆಗಳು ನಮ್ಮ ವಿಸ್ಮೃತಿಯನ್ನು ಸರಿಯಾಗಿ ವಿವರಿಸುವುದಿಲ್ಲ. ಏಕೆಂದರೆ ಇಂತಹ ವ್ಯಕ್ತಿಗಳು ತಮ್ಮ ಆಚಾರಗಳ ಕುರಿತು ವಿವರಿಸುವಾಗ ಹಾವಿನ ವಿವರಣೆಯನ್ನೇ ಪುನರುತ್ಪಾದಿಸುತ್ತಾರೆ. ಭಾರತೀಯರಿಗೆ ತಮ್ಮ ಸಾಂಸ್ಕೃತಿಕ ನೆನಪುಗಳು ಕಳೆದು ಹೋಗುತ್ತಿವೆ ಎಂಬುದು ಈ ಅಧ್ಯಾಸದ ಕಾರಣಕ್ಕಾಗಿ ಅರಿವಿಗೆ ಬರುತ್ತಿಲ್ಲ ಎನ್ನಬೇಕಾಗುತ್ತದೆ. ಇದನ್ನು ಒಂದು ಉದಾಹರಣೆಯ ಮುಖಾಂತರ ನಾವು ಸ್ಪಷ್ಟಪಡಿಸಿಕೊಳ್ಳೋಣ.
ಇತ್ತೀಚಿನ ದಿನಗಳಲ್ಲಿ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯು ಸ್ವತಂತ್ರ ಭಾರತದ ಶೈಕ್ಷಣಿಕ ಪುನರುಜ್ಜೀವನದ ಮುನ್ನುಡಿ ಎನ್ನುವಂತೆ ಬಹುತೇಕ ಭಾರತೀಯರು ಭಾವಿಸಿದ್ದಾರೆ. ಈ ಶಿಕ್ಷಣ ನೀತಿಯಲ್ಲಿ ಭಾರತೀಯ ಪರಂಪರೆಯ ಕುರಿತಾದ ಕೆಲವು ಮುಖ್ಯ ನಿಲುವುಗಳನ್ನು ತೆಗೆದುಕೊಳ್ಳಲಾಗಿದೆ. ಈ ಹೊಸ ನೀತಿಯ ಪ್ರಕಾರ ಭಾರತದ ಪರಂಪರಾನುಗತ ಕಲಿಕಾ ಕ್ರಮ ಭಾರತಕ್ಕಷ್ಟೇ ಅಲ್ಲದೇ ಜಗತ್ತಿಗೂ ಮಾದರಿಯಾಗಬಲ್ಲದು ಎನ್ನಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಹೇಳುವಂತೆ – “India has a long tradition of holistic and multidisciplinary learning, from universities such as Takshashila and Nalanda, to the extensive literatures of India combining subjects across fields”. ಅಷ್ಟೇ ಅಲ್ಲ ಭಾರತೀಯ ಶಿಕ್ಷಣವು ವ್ಯಕ್ತಿಯೊಬ್ಬನಿಗೆ ಯಾವ ರೀತಿ ಈ ಸಂಸಾರದಿಂದ ಮುಕ್ತಿಯನ್ನು ಕೇಂದ್ರದಲ್ಲಿ ಇಟ್ಟುಕೊಂಡಿತ್ತು ಎನ್ನುವುದನ್ನು ವಿವರಿಸಲಾಗುತ್ತದೆ, ಅವರ ಪ್ರಕಾರ – “The aim of education in ancient India was not just the acquisition of knowledge as preparation for life in this world, or life beyond schooling, but for the complete realization and liberation of the self. World-class institutions of ancient India such as Takshashila, Nalanda, Vikramshila, Vallabhi, set the highest standards of multidisciplinary teaching and research and hosted scholars and students from across backgrounds and countries”. ಅಷ್ಟೇ ಅಲ್ಲ ಭಾರತದ ಈ ವಿದ್ಯಾಲಯಗಳು ಜಗತ್ತಿನ ಬೇರೆ ದೇಶದ ವಿದ್ಯಾರ್ಥಿಗಳನ್ನು ಬಹುದೊಡ್ಡ ಸಂಖ್ಯೆಯಲ್ಲಿ ಜ್ಞಾನಾರ್ಜನೆಗಾಗಿ ಸೆಳೆಯುತ್ತಿದ್ದವು ಎಂದು ವಾದಿಸಲಾಗುತ್ತದೆ. ಈ ಶಿಕ್ಷಣ ನೀತಿಯ ಪ್ರಕಾರ – “The ancient Indian universities Takshashila, Nalanda, Vallabhi, and Vikramshila, which had thousands of students from India and the world studying in vibrant multidisciplinary environments, amply demonstrated the type of great success that large multidisciplinary research and teaching universities could bring”. ಒಟ್ಟಾರೆಯಾಗಿ ಹೇಳಬೇಕೆಂದರೆ ನಳಂದ ಮಾದರಿಯು ರಾಷ್ಟ್ರೀಯ ಶಿಕ್ಷಣ ನೀತಿಗೆ ಭಾರತದ ಭವಿಷ್ಯದ ಶಿಕ್ಷಣವನ್ನು ರೂಪಿಸಲು ಪ್ರೇರಣಾದಾಯಿಯಾಗಿ ಕಾಣುತ್ತದೆ.
ಈ ನಳಂದ ಮಾದರಿಯ ಶಿಕ್ಷಣ ಇಂದು ಇದೆಯೇ? ಆ ರೀತಿಯ ಶಿಕ್ಷಣವೊಂದು ಇಂದಿಗೂ ಭಾರತದಲ್ಲಿ ಅಸ್ತಿತ್ವದಲ್ಲಿದ್ದರೆ ಅದು ಈ ಶಿಕ್ಷಣ ನೀತಿಯಲ್ಲಿ ಮಾನ್ಯವೇ ಎಂದೊಮ್ಮೆ ಪರೀಕ್ಷಿಸಿದರೆ ನಮಗೆ ನಮ್ಮ ವಿಸ್ಮೃತಿಯ ಮತ್ತು ಅದರ ಪರಿಣಾಮಗಳ ವಿಸ್ತಾರ ತಿಳಿದುಬರುತ್ತದೆ. ಈ ಶಿಕ್ಷಣ ನೀತಿಯು ಪ್ರಸ್ತಾಪಿಸುತ್ತಿರುವ ನಳಂದವನ್ನು ಇಂದು ವಿಶ್ವವಿದ್ಯಾನಿಲಯ ಎಂದು ವಾದಿಸುತ್ತಾರೆ. ಆದರೆ ಮೂಲಭೂತವಾಗಿ ನಳಂದ ಎನ್ನುವುದು ಬೌದ್ಧ ಪರಂಪರೆಯ ಒಂದು ಮಹಾವಿಹಾರ. ಈ ಮಹಾವಿಹಾರವು ಸುಮಾರು ಐದನೇ ಶತಮಾನದಿಂದ ಹದಿಮೂರನೆ ಶತಮಾನದವರೆಗೆ ಭರತ ಖಂಡದ ಅತ್ಯಂತ ಪ್ರಮುಖ ಬೌದ್ಧ ಶಿಕ್ಷಣ ಕೇಂದ್ರವಾಗಿತ್ತು. ಈ ಪರಂಪರೆಯಿಂದ ಟಿಬೆಟ್ಟಿನ ರಾಜರು ತಮ್ಮ ರಾಜ್ಯದಲ್ಲಿ ಬೌದ್ಧ ಕಲಿಕಾ ಕ್ರಮವನ್ನು ಶಿಸ್ತು ಬದ್ಧಗೊಳಿಸಲು ಅನೇಕ ಶಿಷ್ಯರನ್ನು ನಳಂದ ಮಹಾವಿಹಾರಕ್ಕೆ ಕಳುಹಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸಂಗತಿ.
ಇಸ್ಲಾಂ ಆಕ್ರಮಣದ ನಂತರ ಇಡೀ ನಳಂದ ಕಲಿಕಾ ಕ್ರಮವನ್ನು ಟಿಬೆಟ್ಟಿನ ವಜ್ರಯಾನ ಅಥವಾ ತಂತ್ರಯಾನ ಪರಂಪರೆಗಳಲ್ಲಿ ಸಮಗ್ರವಾಗಿ ಮತ್ತು ಸಂಪೂರ್ಣವಾಗಿ ಸಂರಕ್ಷಿಸಲಾಯಿತು. ಈ ವಿಹಾರಗಳಲ್ಲಿ ಧರ್ಮಪಾಲ, ನಾಗಾರ್ಜುನ, ಧರ್ಮಕೀರ್ತಿ, ಚಂದ್ರಕೀರ್ತಿ, ಅಸಂಗ, ವಸುಬಂಧು, ಶಿಲಾಭದ್ರ, ಶಾಂತರಕ್ಷಿತ ಇತ್ಯಾದಿ ಅನೇಕ ಆಚಾರ್ಯರು ಗಂಭೀರವಾಗಿ ಬೆಳೆಸಿದ ಪರಂಪರೆಯನ್ನು ಟಿಬೆಟ್ಟಿನ ವಜ್ರಯಾನ ಪರಂಪರೆಯಲ್ಲಿ ಮುಂದುವರಿಸಿದರು. ಟಿಬೆಟ್ಟಿನ ವಿಹಾರಗಳಲ್ಲಿ ಅನೇಕ ಪರಂಪರೆಗಳಿವೆ. ಈ ಪರಂಪರೆಗಳು ಕೆಲವೊಂದು ಸಹಸ್ರಮಾನಕ್ಕೂ ಹಳೆಯದಾದರೆ, ಕೆಲವು ಅತ್ಯಂತ ಹೊಸ ಪರಂಪರೆಗಳು ೬೦೦ ವರ್ಷಕ್ಕೂ ಹಳೆಯದಾಗಿವೆ. ಇವುಗಳಲ್ಲಿ ಪ್ರಮುಖವಾಗಿ ನ್ಯಿಂಮಾ, ಕಗ್ಯು, ಸಕ್ಯ, ಗೆಲುಕ್ ಇತ್ಯಾದಿ ಪರಂಪರೆಗಳು ಇಡೀ ನಳಂದ ಕಲಿಕಾ ಕ್ರಮವನ್ನು ಜತನದಿಂದ ಕಾಪಾಡಿಕೊಂಡು ಬಂದಿವೆ. ಇಲ್ಲಿ ಸರಿಸುಮಾರು ೨೦ ರಿಂದ ೨೬ ವರ್ಷಗಳ ಕಾಲ ವಿದ್ಯಾರ್ಥಿಗಳು ಗಂಭೀರವಾದ ಅಧ್ಯಯನದಲ್ಲಿ ತೊಡಗುತ್ತಾರೆ. ಪ್ರಾರಂಭಿಕ ಕೆಲವು ವರ್ಷಗಳಲ್ಲಿ ತರ್ಕ, ಭಾಷೆ ಇತ್ಯಾದಿಗಳನ್ನು ಕಲಿತರೆ, ನಂತರ ಪ್ರಜ್ಞಾಪರಿಮಿತ ಸೂತ್ರ, ಮಾಧ್ಯಮಿಕ ಬೌದ್ಧ ಸಂಪ್ರದಾಯ, ವಿನಯ, ಅಭಿಧಮ್ಮ ಇತ್ಯಾದಿಯಾಗಿ ಕನಿಷ್ಠ ೧೭-೨೦ ವರ್ಷಗಳ ಕಾಲ ಭಿಕ್ಷುವೊಬ್ಬ ಅಧ್ಯಯನಕ್ಕೆ ತೊಡಗುತ್ತಾನೆ. ಈ ಅಧ್ಯಯನದಲ್ಲಿ ಆತನ ದಿನಚರಿ ಬೆಳಗಿನ ಜಾವದಿಂದ ಪ್ರಾರಂಭಗೊಂಡು ರಾತ್ರಿ ಹತ್ತರವರೆಗೆ ನಡೆಯುತ್ತದೆ. ನಾವು ಪಾರಂಪರಿಕವಾದ ಕ್ರಮದ ಬಗ್ಗೆ ಮಾತನಾಡುವ ರೀತಿ-ನೀತಿಗಳನ್ನು ಇಲ್ಲಿ ಸುಮಾರು ೨೦ ವರ್ಷಗಳ ಕಾಲ ನಿತ್ಯವೂ ವಾದದಲ್ಲಿ ತೊಡಗಿ ವಾದವನ್ನು ಹೇಗೆ ಮಾಡಬೇಕು ಎನ್ನುವುದನ್ನು ಕಲಿಯುವ ಮುಖಾಂತರ ಅವರು ತಮ್ಮ ಆಂತರಿಕ ವಿಕಸನದ ಸಾಧನೆಗಾಗಿ ಕೆಲಸ ಮಾಡುತ್ತಾರೆ.
ಇಂತಹ ಜೀವಂತ ನಳಂದ ಪರಂಪರೆ ಭಾರತದ ಅನೇಕ ವಿಹಾರಗಳಲ್ಲಿ ನಿರಂತರವಾಗಿ ಉಳಿದುಕೊಂಡೇ ಬಂದಿದೆ. ೧೯೫೦ ರ ದಶಕದಲ್ಲಿ ಟಿಬೆಟ್ಟಿನ ಮೇಲೆ ಚೈನಾದ ಆಕ್ರಮಣದ ತರವಾಯು ದಲೈ ಲಾಮಾ ಸಹಿತ ಟಿಬೆಟ್ಟಿನ ಕನಿಷ್ಠ ೨ ಪ್ರತಿಶತ ಜನ ಭಾರತಕ್ಕೆ ವಲಸೆ ಬಂದರು. ಅವರು ೬೦ರ ದಶಕದಲ್ಲಿ ಇಡೀ ನಳಂದ ಪರಂಪರೆಗಳನ್ನು ಭಾರತದಲ್ಲಿ ಪುನರಾರಂಭಿಸಿದರು. ಈ ಪರಂಪರೆಗಳಲ್ಲಿ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ೧೫ ರಿಂದ ೨೦ ವರ್ಷದ ಅಧ್ಯಯನವನ್ನು ಮುಗಿಸಿ ಗೆಶೆ, ಕೆಂಫೋ ಇತ್ಯಾದಿ ಪದವಿಗಳನ್ನು ಹೊಂದುತ್ತಾರೆ. ಇದು ವ್ಯಕ್ತಿಯೊಬ್ಬ ತಾನು ಪರಮಾರ್ಥಕ್ಕಾಗಿ ಅಥವಾ ಆನಂದಕ್ಕಾಗಿ ಮಾಡುವ ಸಾಧನೆ. ಇದು ನಳಂದ ಮಾದರಿಯ ಉದಾಹರಣೆಯಾದರೆ ಭಾರತದಾದ್ಯಂತ ಹಲವಾರು ಗುರುಕುಲಗಳಲ್ಲಿ ಪರಂಪರಾನುಗತ ಶಿಕ್ಷಣ ಮುಂದುವರಿಯುತ್ತದೆ. ವೇದ, ನ್ಯಾಯ, ಮೀಮಾಂಸಾ, ಕೃಷಿ, ಸ್ಥಪತಿ ಇತ್ಯಾದಿ ಅನೇಕ ಗುರುಕುಲಗಳು ಭಾರತದಲ್ಲಿ ಇಂದಿಗೂ ಸಹಸ್ರಾರು ಜನರನ್ನು ಶಿಕ್ಷಿತರನ್ನಾಗಿ ಮಾಡುತ್ತವೆ.
ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಸ್ತಾಪಿಸುತ್ತಿರುವ ಈ ನಳಂದ ಶಿಕ್ಷಣದ ಕ್ರಮ ಇಂದಿಗೂ ಭಾರತದಲ್ಲಿ ಅಸ್ತಿತ್ವದಲ್ಲಿದೆ. ಕರ್ನಾಟಕದಲ್ಲಿ ಮುಂಡಗೋಡು, ಬೈಲುಕೊಪ್ಪ, ಹುಣಸೂರಿನಲ್ಲಿ ಸುಮಾರು ೩೦,೦೦೦ ದಷ್ಟು ಭಿಕ್ಕುಗಳು ನಳಂದ ಮಾದರಿಯಲ್ಲಿ ಇಂದಿಗೂ ನಿರಂತರವಾಗಿ ಅಧ್ಯಯನವನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದ ಯಾವುದಾದರೂ ವಿಶ್ವವಿದ್ಯಾನಿಲಯ ಈ ನಳಂದ ಮಾದರಿಯಿಂದ ಏನನ್ನಾದರೂ ಕಲಿತಿದೆಯೇ ಎಂದು ಕೇಳಿಕೊಂಡರೆ ಆ ದೃಷ್ಟಿಯಿಂದ ನಮಗೆ ಒಂದೇ ಒಂದು ಉದಾಹರಣೆಯೂ ಸಿಗುವುದಿಲ್ಲ. ಅಷ್ಟೇ ಅಲ್ಲ ಇಂದಿಗೂ ಈ ನಳಂದ ಮಾದರಿಯ ಶಿಕ್ಷಣವನ್ನು ಕ್ರಮಬದ್ಧವಾಗಿ ಜಾರಿಯಲ್ಲಿ ಇಟ್ಟಿರುವ ಯಾವುದೇ ವಿಹಾರಗಳ ಪದವಿಗೆ ನಮ್ಮ ಶಿಕ್ಷಣ ವ್ಯವಸ್ಥೆಯ ಮಾನ್ಯತೆಯೇ ಇಲ್ಲ. ಕನಿಷ್ಠ ಪಕ್ಷ ಯಾವ ನಳಂದದಿಂದ ಪ್ರೇರಣೆಗೊಂಡು ಶಿಕ್ಷಣ ನೀತಿಯನ್ನು ರೂಪಿಸಬೇಕೆಂದು ವಾದಿಸಲಾಗುತ್ತದೆಯೋ ಆ ಮಾದರಿಯ ಶಿಕ್ಷಣವನ್ನು ನಮ್ಮದೇ ಸ್ವತಂತ್ರ ಭಾರತದ ಪ್ರಜಾಪ್ರಭುತ್ವದಲ್ಲಿ ಅಮಾನ್ಯ ಮಾಡಲಾಗಿದೆ. ಅಷ್ಟೇ ಅಲ್ಲ ಈ ಕಲಿಕಾ ಕ್ರಮವನ್ನೇನಾದರೂ ಯು.ಜಿ.ಸಿಯ ನಿಯಮಾವಳಿಗಳಲ್ಲಿ ಮಾನ್ಯಮಾಡಬೇಕೆಂದು ಹೊರಟರೆ ಅದು ವಿಹಾರದ ಕಲಿಕೆಯನ್ನೇ ಸಂಪೂರ್ಣವಾಗಿ ವಿಶ್ವವಿದ್ಯಾಲಯದ ಚೌಕಟ್ಟಿನೊಳಗೆ ತಂದು ಸಹಸ್ರಮಾನಗಳಿಂದ ರಕ್ಷಿಸಲ್ಪಟ್ಟ ಈ ಕಲಿಕಾ ಕ್ರಮವನ್ನೇ ಮೂಲಭೂತವಾಗಿ ವ್ಯತ್ಯಾಸ ಮಾಡಲು ಹೊರಟು ಬಿಡುತ್ತದೆ. ಈ ವಿಹಾರಗಳಲ್ಲಿ ಸತತ ಎರಡು ದಶಕಗಳ ಕಾಲ ನಿರಂತರ ಪ್ರತಿನಿತ್ಯ ವಾದದಲ್ಲಿ ತೊಡಗಿ ಅಲ್ಲಿನ ವಿದ್ಯಾರ್ಥಿಗಳು ಯಾವುದೇ ಐಡಿಯಾಲಜಿಯ ಹಿಡಿತಕ್ಕೆ ಸಿಲುಕದೇ ಈ ಜಗತ್ತನ್ನು ಗ್ರಹಿಸುತ್ತಾರೆ. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ಪಠ್ಯಪುಸ್ತಕಗಳಿಂದ ಆರಂಭಿಸಿ ಭಾರತದ ಕುರಿತಾದ ತಿಳಿವಳಿಕೆಯೆಲ್ಲವೂ ಐಡಿಯಾಲಜಿಗಳಿಂದಲೇ (ಲಿಬರಲಿಸಂ, ಮಾರ್ಕ್ಸಿಸಂ ಇತ್ಯಾದಿ) ಹೊರಡುತ್ತದೆ. ವಿಹಾರಗಳಲ್ಲಿ ಅವರ ಕಲಿಕೆಯಲ್ಲಿ ನಿತ್ಯವೂ ವಾದದಲ್ಲಿ ತೊಡಗುತ್ತಾರೆ ಮತ್ತು ಈ ವಾದದ ಕ್ರಮವೇ ತತ್ತ್ವ ಬೋಧನೆಗೆ ಬೇಕಾದ ಧ್ಯಾನಸ್ಥ ಸ್ಥಿತಿಯನ್ನು ನಿರ್ಮಿಸುತ್ತದೆ. ವಿಶ್ವವಿದ್ಯಾನಿಲಯಗಳಲ್ಲಿ ವಾದಗಳು, ಚರ್ಚೆಗಳು ತಮ್ಮ ಅಭಿಪ್ರಾಯಗಳನ್ನು, ಐಡಿಯಾಲಜಿಗಳನ್ನು ವ್ಯಾಪಾರ ಮಾಡಿಕೊಳ್ಳಲು ಇರುವ ಸಾಧನಗಳಾಗಿವೆ.
ಅಂದರೆ ನಮ್ಮ ವಿಶ್ವವಿದ್ಯಾನಿಲಯಗಳು ಯುರೋಪಿನ ಜ್ಞಾನ ಪರಂಪರೆಗಳ ಹಿನ್ನೆಲೆಯಿಂದ ಬೆಳೆದು ಬಂದವು. ವಿಹಾರ, ಗುರುಕುಲ ಇತ್ಯಾದಿ ಪಾರಂಪರಿಕ ಕಲಿಕೆಗಳು ಭಾರತೀಯ ಜ್ಞಾನ ಪರಂಪರೆಗಳ ಹಿನ್ನೆಲೆಯಿಂದ ಹುಟ್ಟಿಬಂದವು. ಇವೆರಡೂ ಸಾಂಸ್ಥಿಕವಾಗಿ ಮತ್ತು ರಚನಾತ್ಮಕವಾಗಿ ಭಿನ್ನ ಭಿನ್ನ ಉದ್ದೇಶಗಳನ್ನು ಹೊಂದಿವೆ. ನಮ್ಮ ಆಧುನಿಕ ಶಿಕ್ಷಣ ಪದ್ಧತಿಯು ಪಾರಂಪರಿಕ ಕಲಿಕೆಯ ಕ್ರಮಗಳನ್ನು ಮೂಲೋತ್ಪಾಟನೆ ಮಾಡುತ್ತಲೆ ಮುಂದುವರೆದಿವೆ. ಧರಂಪಾಲರ ‘The Beautiful Tree’ ಗ್ರಂಥವು ಇಂಗ್ಲೀಷ್ ಶಿಕ್ಷಣ ಪದ್ಧತಿಯು ಹೇಗೆ ಭಾರತೀಯ ಕಲಿಕಾ ಕ್ರಮಗಳನ್ನು ಹಂತಹಂತವಾಗಿ ಮತ್ತು ವ್ಯವಸ್ಥಿತವಾಗಿ ಕೊಲ್ಲತೊಡಗಿತು ಎಂದು ವಿವರಿಸುತ್ತದೆ. ಅಂದರೆ ಇಂದು ನಮ್ಮ ಪಾರಂಪರಿಕ ಕ್ರಮವನ್ನೇ ಆಧರಿಸಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಆಧುನಿಕ ಶಿಕ್ಷಣ ವ್ಯವಸ್ಥೆಯು ಒಪ್ಪುವುದಿಲ್ಲ ಮತ್ತು ಇದೊಂದು ಸಾಂಸ್ಥಿಕ ಮತ್ತು ರಚನಾತ್ಮಕ ಸಮಸ್ಯೆ ಎನ್ನುವುದನ್ನೇ ಭಾರತೀಯರು ಗ್ರಹಿಸುತ್ತಿಲ್ಲ ಎನ್ನುವುದು ಅತಿದೊಡ್ಡ ವಿಪರ್ಯಾಸ. ಆದರೆ ಇಂದು ಭಾರತೀಯ ಶಿಕ್ಷಣದ ಪರಿವರ್ತನೆಯ ಹರಿಕಾರರು ನಿಜವಾಗಿ ಜೀವಂತವಾಗಿರುವ ನಳಂದ ಮಾದರಿಯನ್ನು ಅಥವಾ ಗುರುಕುಲ ವ್ಯವಸ್ಥೆಯನ್ನು ಅರ್ಥೈಸಿಕೊಂಡು ನಮ್ಮ ಹೊಸ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುತ್ತಿಲ್ಲ. ಬದಲಿಗೆ ಯುರೋಪಿನ ವಿವರಣೆಯ ನಳಂದದ ಕಥೆಯನ್ನು ವಿಶ್ವವಿದ್ಯಾನಿಲಯಗಳಿಗೆ ಒಂದು ರಮ್ಯ ಆದರ್ಶವಾಗಿ ಮುಂದಿಟ್ಟು ಜೀವಂತವಾಗಿ ಕಾರ್ಯನಿರ್ವಹಿಸುತ್ತಿರುವ ಕಲಿಕಾ ಕ್ರಮಗಳನ್ನು ಮಾನ್ಯವೂ ಮಾಡಲಾಗದಂತಹ ಗಂಭೀರ ವಿಸ್ಮೃತಿಯಲ್ಲಿ ನಾವಿದ್ದೇವೆ. ಹಾಗಾಗಿ ಇಂದು ಭಾರತದ ಪರಂಪರಾಗತ ಕಲಿಕಾ ಕ್ರಮಗಳು ಕಾನೂನಾತ್ಮಕವಾಗಿ ಅಮಾನ್ಯಗೊಳ್ಳುತ್ತವೆ. ಇದು ವಿಸ್ಮೃತಿಯಲ್ಲದಿದ್ದರೆ ಮತ್ತೇನು? ಇದು ನಮ್ಮ ಮುಂದಿರುವ ಅನುಭವವನ್ನು ಕೈಬಿಟ್ಟು ಈ ಹಿಂದೆ ವಿವರಿಸಿದಂತೆ ಹಗ್ಗವನ್ನು ಹಾವೆಂದು ಭಾವಿಸಿದವರ ಕಥೆಯನ್ನೇ ಪುನಃ ಪುನಃ ಸ್ಮರಿಸುವುದಲ್ಲದೇ ಮತ್ತೇನನ್ನು ಸೂಚಿಸುತ್ತದೆ?

Prof. M.S. Chaitra
Prof. M.S. Chaitra is a distinguished scholar, director, and senior fellow at the Foundation for the Study of Indian Culture (FSIC), a division of the Samhati Foundation, Bengaluru. He is also an Associate Professor at the University of Trans-Disciplinary Health Sciences and Technology (TDU), Bengaluru. His academic trajectory is marked by a unique transdisciplinary approach, bridging the rigor of science with the insights of Indian intellectual traditions. Chaitra's early career involved significant research contributions at esteemed institutions, including the Wildlife Institute of India, Dehradun, and the Centre for Ecological Sciences (CES), Indian Institute of Science (IISc).


