Contact Info

  • ADDRESS: Foundation for Study of Indian Culture
    (A Division of Samhati Foundation)
    # 100, Sri Kudli Shankaracharya Maha Samsthanam,
    Vani Villasa Road, Opposite Lalbagh West Gate,
    V.V. Puram, Basavanagudi,
    Bengaluru – 560004

  • PHONE: +91 7349127979

  • E-MAIL: fsic.bengaluru@gmail.com

Some Populer Post

  • Home  
  • ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ
- Articles - ದಾರಿ ತಪ್ಪಿದ ಸಂಸ್ಕೃತಿ ಚಿಂತನೆ

ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ

ಭಗವದ್ಗೀತೆಯ ಈ ಮೇಲಿನ ವಾಕ್ಯವು ಇಂದು ಸುಪ್ರಸಿದ್ಧವಾಗಿದೆ. ರಿಲಿಜನ್ ಎಂಬ ಪಾಶ್ಚಾತ್ಯ ಶಬ್ದವನ್ನು ಧರ್ಮ ಎಂಬ ಮೂಲಕ ಅನುವಾದಿಸಿಕೊಂಡಿದ್ದೇವೆ. ಭಾರತೀಯ ಶಬ್ದದ ಹಿಂದೂಯಿಸಂ ನಮ್ಮ ಧರ್ಮ ಎಂದು ಭಾವಿಸಿಕೊಂಡಿದ್ದೇವೆ. ಹಾಗೂ ಅನ್ಯ ರಿಲಿಜನ್ ಗಳನ್ನು ಅನುಸರಿಸುವುದಕ್ಕೆ ಬದಲಾಗಿ ನಮ್ಮ ರಿಲಿಜನ್‌ನಲ್ಲಿ (ಹಿಂದೂಯಿಸಂನಲ್ಲಿ) ಪ್ರಾಣಬಿಡುವುದೇ ಶ್ರೇಯಸ್ಕರ ಎಂಬರ್ಥವನ್ನು ಕೂಡ ಈ ವಾಕ್ಯಕ್ಕೆ ಹಚ್ಚುವುದನ್ನು ನೋಡಿದ್ದೇನೆ. ನಮ್ಮ ಪರಂಪರೆಯನ್ನು ಅದರ ವಿರೋಧಿಗಳು ಮಾತ್ರವೇ ಮೂರಾಬಟ್ಟೆ ಮಾಡಬೇಕೆಂದಿಲ್ಲ. ಅದರ ಮೇಲೆ ಅತೀವ ಅಭಿಮಾನವನ್ನು ಇಟ್ಟವರು ಅದಕ್ಕೂ ಚೆನ್ನಾಗಿ ಮಾಡಬಲ್ಲರು ಎಂಬುದಕ್ಕೆ ಇದು […]

ಭಗವದ್ಗೀತೆಯ ಈ ಮೇಲಿನ ವಾಕ್ಯವು ಇಂದು ಸುಪ್ರಸಿದ್ಧವಾಗಿದೆ. ರಿಲಿಜನ್ ಎಂಬ ಪಾಶ್ಚಾತ್ಯ ಶಬ್ದವನ್ನು ಧರ್ಮ ಎಂಬ ಮೂಲಕ ಅನುವಾದಿಸಿಕೊಂಡಿದ್ದೇವೆ. ಭಾರತೀಯ ಶಬ್ದದ ಹಿಂದೂಯಿಸಂ ನಮ್ಮ ಧರ್ಮ ಎಂದು ಭಾವಿಸಿಕೊಂಡಿದ್ದೇವೆ. ಹಾಗೂ ಅನ್ಯ ರಿಲಿಜನ್ ಗಳನ್ನು ಅನುಸರಿಸುವುದಕ್ಕೆ ಬದಲಾಗಿ ನಮ್ಮ ರಿಲಿಜನ್‌ನಲ್ಲಿ (ಹಿಂದೂಯಿಸಂನಲ್ಲಿ) ಪ್ರಾಣಬಿಡುವುದೇ ಶ್ರೇಯಸ್ಕರ ಎಂಬರ್ಥವನ್ನು ಕೂಡ ಈ ವಾಕ್ಯಕ್ಕೆ ಹಚ್ಚುವುದನ್ನು ನೋಡಿದ್ದೇನೆ. ನಮ್ಮ ಪರಂಪರೆಯನ್ನು ಅದರ ವಿರೋಧಿಗಳು ಮಾತ್ರವೇ ಮೂರಾಬಟ್ಟೆ ಮಾಡಬೇಕೆಂದಿಲ್ಲ. ಅದರ ಮೇಲೆ ಅತೀವ ಅಭಿಮಾನವನ್ನು ಇಟ್ಟವರು ಅದಕ್ಕೂ ಚೆನ್ನಾಗಿ ಮಾಡಬಲ್ಲರು ಎಂಬುದಕ್ಕೆ ಇದು ಉದಾಹರಣೆ.

ಈ ವಾಕ್ಯದ ವಾಚ್ಯಾರ್ಥವು ತಿಳಿಸುವಂತೆ ‘ನಮ್ಮ ಧರ್ಮವನ್ನು ಆಚರಿಸುತ್ತ ನಿಧನಹೊಂದುವುದು ಶ್ರೇಯಸ್ಕರ, ಪರಧರ್ಮವು ಭಯವನ್ನು ಹುಟ್ಟಿಸುವಂಥದ್ದು”, ಧರ್ಮ ಎಂಬುದು ರಿಲಿಜನ್ನಲ್ಲ ಅಂದುಕೊಂಡು ಧರ್ಮ ಎಂಬ ಪರಿಭಾಷೆಯನ್ನೇ ಗ್ರಹಿಸಿ ಈ ವಾಕ್ಯದ ಅರ್ಥವನ್ನು ಗ್ರಹಿಸುವುದು ಕೂಡ ಸುಲಭವಲ್ಲ. ಇಲ್ಲಿ ಧರ್ಮ ಎಂದರೇನು? ಕೃಷ್ಣನು ಅರ್ಜುನನಿಗೆ ಕ್ಷಾತ್ರ ಧರ್ಮವನ್ನು ಬೋಧಿಸುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ ಎಂಬುದಾಗಿ ಗ್ರಹಿಸಿ ಭಗವದ್ಗೀತೆಯು ಯುದ್ಧವನ್ನು, ಹಿಂಸೆಯನ್ನು ಪ್ರತಿಪಾದಿಸುತ್ತದೆ ಎಂದು ಕೆಲವರು ಅದನ್ನು ನಕಾರಾತ್ಮಕವಾಗಿ ನೋಡುತ್ತಾರೆ. ಇನ್ನೂ ಕೆಲವರು ಭಾರತದ ಕ್ಷತ್ರಿಯರು ಬೌದ್ಧ ಜೈನಾದಿ ಅಹಿಂಸಾಮಾರ್ಗಗಳ ಪ್ರಭಾವದಿಂದ ಹೇಡಿಗಳಾದರು, ಅದರ ಪರಿಣಾಮವಾಗಿ ಭಾರತವು ವಿದೇಶೀ ಆಕ್ರಮಣಗಳಿಗೆ ತುತ್ತಾಯಿತು ಎಂಬುದಾಗಿ ಆರೋಪಿಸಿ, ಭಗವದ್ಗೀತೆಯು ಕ್ಷಾತ್ರ ಧರ್ಮವನ್ನು ಎತ್ತಿಹಿಡಿಯುವ ಗ್ರಂಥ ಎನ್ನುತ್ತಾರೆ. ಈ ಎರಡೂ ನಿಲುವುಗಳೂ ಭಗವದ್ಗೀತೆಯನ್ನು ಬಳಸಿಕೊಂಡು ಹಿಂಸೆ ಹಾಗೂ ಅಹಿಂಸೆಯ ಕುರಿತು ಕೆಲವು ಸಂದರ್ಭಾತೀತ ಧೋರಣೆಯನ್ನು ಕಟ್ಟಿಕೊಡುವ ಆಧುನಿಕ ಪ್ರಯತ್ನಗಳು. ಅದರಲ್ಲೂ ಅದಕ್ಕೆ ಇಂದು ಹಿಂದೂ-ಮುಸ್ಲಿಂ ಸೆಕ್ಯುಲರ್ ಸಂದರ್ಭ ಹುಟ್ಟಿಕೊಂಡಿದೆ. ಅದರ ಅಂಗವಾಗಿ ಹಿಂದೂ (ಹಿಂದುತ್ವ, ಬ್ರಾಹ್ಮಣ) ಧರ್ಮ ಹಿಂಸೆಯನ್ನು ಬೋಧಿಸುತ್ತದೆ, ಬೌದ್ಧಾದಿ ಶ್ರಮಣ (ಪ್ರಗತಿಪರ, ಸೆಕ್ಯುಲರ್) ಧರ್ಮಗಳು ಅಹಿಂಸೆಯನ್ನು ಬೋಧಿಸುತ್ತವೆ ಎಂಬ ಕ್ಲೀಷೆ ಕೂಡ ಪ್ರಚಲಿತದಲ್ಲಿ ಬಂದಿದೆ. ಇವೆರಡರಲ್ಲಿ ಯಾವ ಧರ್ಮ ಶ್ರೇಯಸ್ಕರ? ಎಂಬ ಪೈಪೋಟಿಯು ಈ ಮೇಲಿನ ಚರ್ಚೆಗೆ ಸಂದರ್ಭವನ್ನು ಸೃಷ್ಟಿಸಿದಂತೆ ಕಾಣುತ್ತದೆ.

ಹಾಗಾದರೆ ಈ ವಾಕ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳುವ ಮಾರ್ಗ ಯಾವುದು? ಹಿಂಸೆ ಅಹಿಂಸೆಗಳನ್ನು ಸಂದರ್ಭಾತೀತ ಮೌಲ್ಯಗಳೆಂಬಂತೆ ಗ್ರಹಿಸಿ ಇಂದಿನ ಚರ್ಚೆಗಳು ನಡೆಯುತ್ತಿವೆಯೆಂಬುದನ್ನು ಗಮನಿಸಿದಾಗ ಬಹುಶಃ ಇದು ಪ್ರಾಚೀನ ಗ್ರಂಥಗಳಲ್ಲಿ ಬರುವ ಕಥೆಗಳು ಹಾಗೂ ಹೇಳಿಕೆಗಳನ್ನು ಹೇಗೆ ಓದಬೇಕೆಂಬುದನ್ನು ನಾವೆಲ್ಲ ಮರೆತ ಲಕ್ಷಣವಿರಬಹುದು. ಏಕೆಂದರೆ ಅಂಥ ಸಾರ್ವತ್ರಿಕ ಮೌಲ್ಯಗಳನ್ನು ತಿಳಿಸುವ ಉದ್ದೇಶ ಈ ವಾಕ್ಯಕ್ಕಿದೆಯೆ? ಅದರಲ್ಲೂ ಧರ್ಮ ಎಂಬ ಪದದ ಅರ್ಥವನ್ನು ಸಾಂದರ್ಭಿಕವಾಗಿ ಗ್ರಹಿಸದಿದ್ದರೆ ಧರ್ಮವೇ ಅಧರ್ಮವಾಗುತ್ತದೆ ಎಂದು ಮಹಾಭಾರತದಲ್ಲೇ ಅನೇಕ ಕಡೆ ಉಲ್ಲೇಖಗಳು ಬಂದಿವೆ. ಅಂದರೆ ಸ್ವಧರ್ಮ ಯಾವುದು ಎಂಬುದನ್ನು ಆಲೋಚಿಸಿಯೇ ನಿರ್ಣಯಿಸಬೇಕಾಗುತ್ತದೆ ಎನ್ನುವುದಾದರೆ “ಸ್ವಧರ್ಮೇ ನಿಧನಂ ಶ್ರೇಯಃ” ಎಂದರೇನು ಎಂಬುದನ್ನು ಸಾಮಾನ್ಯ ನಿಯಮಗಳಿಂದ ಲಕ್ಷಣೀಕರಿಸಲು ಸಾಧ್ಯವಿಲ್ಲ ಅಂದಂತಾಯಿತು.

ಮಹಾಭಾರತದಲ್ಲಿ ಅರ್ಜುನ ವಿಷಾದ ಯೋಗ ಎಲ್ಲರಿಗೂ ಗೊತ್ತಿದ್ದೇ ಇದೆ. ಆದರೆ ಮಹಾಭಾರತದುದ್ದಕ್ಕೂ ಆಗಾಗ ಈ ವಿಷಾದ ಯೋಗಕ್ಕೆ ತುತ್ತಾಗುತ್ತಿದ್ದ ಮತ್ತೊಬ್ಬ ವ್ಯಕ್ತಿ ಇದ್ದಾನೆ. ಅವನೇ ಯುಧಿಷ್ಠಿರ. ಅವನು ಯಾವಾಗಲೂ ಧರ್ಮ ಯಾವುದು ಎಂಬ ಜಿಜ್ಞಾಸೆಯಲ್ಲಿ ತೊಡಗಿರುತ್ತಾನೆ. ಮಿಕ್ಕೆಲ್ಲರೂ ಸಾಮಾನ್ಯ ಮನುಷ್ಯರಂತೆ ಆಯಾ ಸಂದರ್ಭಕ್ಕೆ ಪ್ರತಿಕ್ರಿಯಿಸಿದವರು. ಯುಧಿಷ್ಠಿರನು ಅವರಿಗೆ ವ್ಯತಿರಿಕ್ತ. ತಾನು ಸೋಲುತ್ತೇನೆ ಎಂದು ಗೊತ್ತಿದ್ದೂ ಪಗಡೆ ಆಡುವುದು ಧರ್ಮ ಎಂದು ಸಮರ್ಥಿಸಿಕೊಂಡು ಸರ್ವಸ್ವವನ್ನೂ ಕಳೆದುಕೊಳ್ಳುತ್ತಾನೆ. ಕೌರವನಲ್ಲಿ ಯುದ್ಧ ಬೇಡ. ಅವನು ಕೊಟ್ಟಷ್ಟು ತೆಗೆದುಕೊಂಡು ಬದುಕೋಣ ಎನ್ನುತ್ತಾನೆ. ಯುದ್ಧದಲ್ಲಿ ಗೆದ್ದು ಸಿಂಹಾಸನ ಎದುರಿಗಿರುವಾಗ ತನ್ನಿಂದ ನಡೆದುಹೋದ ಪಾತಕಕ್ಕೆ ಪಶ್ಚಾತ್ತಾಪಪಟ್ಟು ದೀರ್ಘವಾದ ವಿಷಾದದಲ್ಲಿ ತೊಳಲಾಡುತ್ತಾನೆ. ಆದರೆ ಅಂತ್ಯದಲ್ಲಿ ಸದೇಹವಾಗಿ ಸ್ವರ್ಗಕ್ಕೆ ಏರುವವನೂ ಅವನೊಬ್ಬನೇ. ಇದನ್ನು ಗಮನಿಸಿದಾಗ ಮಹಾಭಾರತವು ಯುಧಿಷ್ಠಿರನ ಬದುಕನ್ನು ಮನುಷ್ಯನ ಆದರ್ಶವೆಂದು ಬಿಂಬಿಸುತ್ತಿದೆಯೆ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಆದರೆ ಇಷ್ಟಾಗಿಯೂ ಅವನು ಮಹಾಭಾರತದ ನಾಯಕನಾಗುವುದೇ ಇಲ್ಲ. ಮಹಾಭಾರತದ ಕುರಿತು ಬರೆದ ನಮ್ಮ ಯಾವ ಕವಿವರೇಣ್ಯರ ವಿಶೇಷ ಕುತೂಹಲವನ್ನೂ ಈ ಧರ್ಮರಾಯನು ಕೆರಳಿಸಿದಂತಿಲ್ಲ. ಬದಲಾಗಿ ಅವನ ಧರ್ಮ ಜಿಜ್ಞಾಸೆಯು ಅವನ ದೌರ್ಬಲ್ಯ ಎಂಬಂತೆ ಬಹಳ ಜನರಿಗೆ ಅನಿಸುತ್ತದೆ. ಲೌಕಿಕದಲ್ಲಿ ಮುಳುಗಿಕೊಂಡಿರುವ ಜನರಿಗೆ ಧರ್ಮರಾಯನು ದುರ್ಬಲನಾಗಿಯೂ, ಅಪ್ರಾಯೋಗಿಕನಾಗಿಯೂ, ಅನಾಹುತಕಾರಿಯೂ ಆಗಿಯೇ ಕಾಣಿಸುತ್ತಾನೆ. ಯಾರನ್ನಾದರೂ ಹಾಸ್ಯ ಮಾಡಲಿಕ್ಕೆ, ವ್ಯಂಗ್ಯವಾಗಿ ಚುಚ್ಚಲಿಕ್ಕೆ, ಇಲ್ಲ ಹೀಗಳೆಯಲಿಕ್ಕೆ ಈ ಪಾತ್ರವು ದೈನಂದಿನ ಜೀವನದಲ್ಲಿ ನಕಾರಾತ್ಮಕವಾಗಿ, ಹಾಸ್ಯವಾಗಿ ಇಲ್ಲವೇ ವ್ಯಂಗ್ಯವಾಗಿ ಬಳಕೆಯಾಗುವುದೇ ಹೆಚ್ಚು. ಹೀಗೇಕಾಗಬೇಕು? ಈ ಜನರು ಮಹಾಭಾರತವನ್ನು ಅರ್ಥೈಸುವುದರಲ್ಲಿ ಸೋಲುತ್ತಿದ್ದಾರೆಯೆ? ಅದರ ಆಶಯ ಇವರಿಗೆ ಎಟುಕುತ್ತಿಲ್ಲವೆ?

ಆದರೆ ವಿಚಿತ್ರವೆಂದರೆ ಇದು ಕೇವಲ ಮಹಾಭಾರತದ ಓದುಗರ ಸಮಸ್ಯೆ ಅಲ್ಲ, ಮಹಾಭಾರತವೇ ಅವನನ್ನು ಹಾಗೆ ಚಿತ್ರಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಯುಧಿಷ್ಠಿರನ ಇಂಥ ಧರ್ಮ ಬುದ್ದಿಯಿಂದ ನಡೆಯುವ ಅನಾಹುತಗಳನ್ನೂ ಮಹಾಭಾರತವು ನಮ್ಮ ಮುಂದಿಡುತ್ತದೆ. ಉಳಿದ ಪಾತ್ರಗಳು ಮನಸೋ ಇಚ್ಛೆ ಅವನನ್ನು ತೆಗಳುತ್ತವೆ, ವಿಮರ್ಶಿಸುತ್ತವೆ, ಅವನಿಗೆ ಬುದ್ದಿವಾದ ಹೇಳುತ್ತವೆ. ಧರ್ಮರಾಜನೂ ಕೂಡ ಸುಳ್ಳು ಹೇಳುವ, ಹಿಂಸೆ ಅನ್ಯಾಯಗಳನ್ನು ಮಾಡುವ ಸಂದರ್ಭಗಳನ್ನು ತರುತ್ತದೆ. ಅಂದರೆ ಧರ್ಮರಾಜನ ಧೋರಣೆಯನ್ನು ವೈಭವೀಕರಿಸುವ ಉದ್ದೇಶ ಮಹಾಭಾರತಕ್ಕಿದ್ದಂತಿಲ್ಲ. ಬದಲಾಗಿ ಅವನ ಜಿಜ್ಞಾಸೆಯು ಹೇಗೆ ಲೌಕಿಕ ವ್ಯವಹಾರಗಳಿಗೆ ತೊಡಕನ್ನು ಸೃಷ್ಟಿಸುತ್ತ ಹೋಗುತ್ತದೆ ಎಂಬುದನ್ನು ನಿದರ್ಶಿಸುವಂತಿದೆ ಅದು. ಹಾಗಾದರೆ ಧರ್ಮಜಿಜ್ಞಾಸೆಯೇ ಈ ಪ್ರಪಂಚದಲ್ಲಿ ಬದುಕುವವರಿಗೆ ಅಪ್ರಾಯೋಗಿಕ ಎಂಬ ಸಂದೇಶವೇನಾದರೂ ಮಹಾಭಾರತದಲ್ಲಿದೆಯೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಾಗ ಗಮನದಲ್ಲಿಡಬೇಕಾದ ಅಂಶವೆಂದರೆ ಮಹಾಭಾರತವು ಧರ್ಮ ಎಂದರೇನು? ಎಂಬ ಪ್ರಶ್ನೆಯನ್ನೇ ಪ್ರಧಾನವಾಗಿ ಶೋಧಿಸುತ್ತದೆ ಎಂಬುದು. ಸಾಮಾಜಿಕ ಜೀವನದಲ್ಲಿ ಮನುಷ್ಯ ಧರ್ಮಗಳು ವರ್ಣ, ದೇಶ, ಕಾಲಗಳ ಸಂದರ್ಭವನ್ನು ಅವಲಂಬಿಸಿರುತ್ತವೆ. ಕೆಲವೊಮ್ಮೆ ಒಪ್ಪಿತ ಧರ್ಮವೂ ಅಧರ್ಮವಾಗುತ್ತದೆ, ಅಧರ್ಮವೂ ಧರ್ಮವಾಗುತ್ತದೆ. ಹಾಗಾಗಿ ಧರ್ಮದ ಗತಿ ಬಹು ಸೂಕ್ಷ್ಮವಾದುದು ಎಂದು ಮಹಾಭಾರತದಲ್ಲಿ ಅನೇಕ ಕಡೆಗಳಲ್ಲಿ ತಿಳಿಸಲಾಗಿದೆ. ಅಂದರೆ ಸಂದರ್ಭಗಳನ್ನು ಗಮನಿಸದೇ ಆಚರಿಸಿದ ಧರ್ಮವೂ ಅಧರ್ಮವಾಗುವ ಸಾಧ್ಯತೆ ಇರುತ್ತದೆ. ಮಹಾಭಾರತದ ಪಾತ್ರಗಳು ಇಂಥ ಧರ್ಮ ಸೂಕ್ಷ್ಮಗಳನ್ನು ನಿರ್ಣಯಿಸಿದ ಬಗೆ ಯಾವುದು ಎಂಬುದನ್ನು ಆ ಗ್ರಂಥವು ಓದುಗರಿಗೆ ನಿದರ್ಶಿಸುತ್ತದೆ.

ಯುಧಿಷ್ಠಿರನೊಬ್ಬ ಕ್ಷತ್ರಿಯ. ಆದರೆ ಅವನು ಬ್ರಾಹ್ಮಣ ವರ್ಣಕ್ಕೆ ಅಥವಾ ಸನ್ಯಾಸಕ್ಕೆ ಸಲ್ಲುವ ಧರ್ಮವನ್ನು ತನ್ನ ಆಚರಣೆಯಲ್ಲಿ ಪ್ರಕಟಿಸತೊಡಗುತ್ತಾನೆ. ಮರಳಿ ರಾಜ್ಯವನ್ನು ಪಡೆಯುವ ಕುರಿತು ನಿರಾಸಕ್ತನಾಗುತ್ತಾನೆ. ಮಾನಸಿಕ ಕ್ಷೋಭೆಯನ್ನು ಅನುಭವಿಸುತ್ತ ರಾಜ್ಯಭಾರದಲ್ಲಿ ನಿರಾಸಕ್ತನಾಗುತ್ತಾನೆ ಹಾಗೂ ಸನ್ಯಾಸವನ್ನು ಸ್ವೀಕರಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಆಗ ದ್ರೌಪದಿಯಿಂದ ಹಿಡಿದು ಅವನ ಸಹೋದರರೆಲ್ಲರೂ ಅವನ ಮನವೊಲಿಸಲು ಪ್ರಯತ್ನಿಸುತ್ತಾರೆ. ಕೃಷ್ಣ, ಭೀಷ್ಮ, ವ್ಯಾಸಾದಿಗಳೂ ಕೂಡ ಬುದ್ದಿವಾದಗಳನ್ನು ಹೇಳುತ್ತಾರೆ. ಆ ಸಂಬಂಧಿಸಿ ಕಥೆಗಳೂ ಉದಾಹರಿಸಲ್ಪಟ್ಟಿವೆ. ಜನಕ ಹಾಗೂ ಆತನ ಪತ್ನಿಯ ಸಂವಾದ, ಇಂದ್ರ ಬೃಹಸ್ಪತಿ ಸಂವಾದ, ಸುದ್ಯುಮ್ನನ ಚರಿತ್ರೆ ಇತ್ಯಾದಿ. ಈ ಸಂಬಂಧಿಸಿಯೇ ಬರುವ ವಿದುಲೋಪಾಖ್ಯಾನದಲ್ಲಿ ವಿದುಲೆಯೆಂಬ ರಾಣಿಯು ಯುದ್ಧಮಾಡುವುದರಲ್ಲಿ ಆಸಕ್ತಿ ಕಳೆದುಕೊಂಡ ತನ್ನ ಮಗನಿಗೆ ಕ್ಷತ್ರಿಯ ಧರ್ಮದ ಮಹತ್ವವನ್ನು ತಿಳಿಸಿಕೊಡುತ್ತಾಳೆ. ಶತ್ರುಗಳಿಂದ ಪೀಡಿತರಾದ, ಹತಾಶರಾಗಿರುವ, ವಿನಾಶದ ಹಾದಿಯಲ್ಲಿರುವ ರಾಜರು ಈ ಕಥೆಯನ್ನು ಕೇಳಬೇಕು ಎಂದು ಮಹಾಭಾರತ ತಿಳಿಸುತ್ತದೆ. ಇಲ್ಲೆಲ್ಲ ಬರುವ ಉಪದೇಶ ಹೇಗಿರುತ್ತದೆ? ಕ್ಷತ್ರಿಯನಾದವನಿಗೆ ವೈರಾಗ್ಯ, ಪರಿತ್ಯಾಗ, ಭಿಕ್ಷಾವೃತ್ತಿಗಳು ಶೋಭೆಯನ್ನು ತರುವುದಿಲ್ಲ. ಧನಹೀನನಾದ ದರಿದ್ರನನ್ನು ಪಾತಕಿ ಎಂಬಂತೆ ನೋಡುತ್ತಾರೆ. ಏಕೆಂದರೆ ಹಣವಿಲ್ಲದವನು ಹಾಗೂ ಪಾತಕಿಗಳಿಬ್ಬರೂ ಶೋಚನೀಯ ಸ್ಥಿತಿಯಲ್ಲಿರುತ್ತಾರೆ. ಹಣವಿಲ್ಲದೇ ಏನೂ ಸಿಗುವುದಿಲ್ಲ. ಹಣದಿಂದಲೇ ಬಂಧು ಮಿತ್ರರೆಲ್ಲ ಸಿಗುತ್ತಾರೆ, ರಾಜ್ಯ, ಸಿಂಹಾಸನ ಇವೆಲ್ಲ ಇಲ್ಲದೇ ಧರ್ಮ ಸಾಧನೆ ಹೇಗೆ ಸಾಧ್ಯ? ರಾಜನಾದವನಿಗೆ ಯಜ್ಞದಲ್ಲಿ ಧನವನ್ನು ವಿನಿಯೋಗಿಸುವುದೇ ತ್ಯಾಗ. ರಾಜನು ಯುದ್ಧಮಾಡದೇ ಮತ್ತೊಬ್ಬರ ಧನವನ್ನು ಹೇಗೆ ವಶಪಡಿಸಿಕೊಳ್ಳಬಲ್ಲ? ರಾಜನಾದವನಿಗೆ ಧನ, ಹೆಣ್ಣು, ಅಧಿಕಾರಗಳ ಮೋಹ ಇರಬೇಕು. ಅವು ಧರ್ಮಕ್ಕೆ ಸಾಧನವಾಗುತ್ತವೆ. ಸನ್ಯಾಸಿಯ ಸ್ಥಿತಿ ಅವನಿಗೆ ಹೀನಾಯವಾದುದು. ಅನ್ಯರಲ್ಲಿ ತುತ್ತು ಕೂಳಿಗಾಗಿ ಕೈಚಾಚುವುದು ಅಭಿಮಾನರಹಿತ ಬದುಕು, ಅದಕ್ಕಿಂತ ಸಾವೇ ಮೇಲು, ಇತ್ಯಾದಿ, ಇತ್ಯಾದಿ.

ಇದೇ ಸಂಕಲನದ ‘ಕೌಪೀನವಂತಃ ಖಲು ಭಾಗ್ಯವಂತಃ’ ಲೇಖನದಲ್ಲಿ ಬ್ರಾಹ್ಮಣ ಹಾಗೂ ಸನ್ಯಾಸಿಗಳ ಸಂದರ್ಭದಲ್ಲಿ ಭಿಕ್ಷಾ ವೃತ್ತಿಯು ಎಷ್ಟು ಪೂಜನೀಯವಾಗಿತ್ತು ಎಂಬುದನ್ನು ಪ್ರಸ್ತಾಪಿಸಿದ್ದೆ. ಆದರೆ ಇಲ್ಲಿ ಆ ವೃತ್ತಿಗಿಂತ ಸಾವೇ ಲೇಸು ಎಂದು ಹೇಳುತ್ತಿದ್ದಾರೆ. ಇಂಥ ಹೇಳಿಕೆಗಳನ್ನು ಗಮನಿಸಿದರೆ ಮಹಾಭಾರತದ ಪ್ರಕಾರ ಭಿಕ್ಷಾ ವೃತ್ತಿ ತನ್ನಷ್ಟಕ್ಕೇ ಧರ್ಮವೂ ಅಲ್ಲ, ಅಧರ್ಮವೂ ಅಲ್ಲ ಎಂಬುದು ತಿಳಿಯುತ್ತದೆ. ಕ್ಷತ್ರಿಯನ ಅಥವಾ ಗೃಹಸ್ಥನ ಜೀವನದ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಅದು ಅವಹೇಳನಕಾರಿಯಾದುದು. ಆದರೆ ಬ್ರಾಹ್ಮಣ, ಶ್ರಮಣರ ಜೀವನದ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಅದು ಪೂಜನೀಯವಾದುದು.

ಹಾಗಂತ ಕ್ಷತ್ರಿಯರಿಗೆ ಅಂತ ಒಂದು ಸಾರ್ವತ್ರಿಕ ಧರ್ಮ ಇತ್ತೆ? ಮಹಾಭಾರತದಲ್ಲಿ ರಾಜಧರ್ಮದ ಕುರಿತು ದೀರ್ಘ ಸಂವಾದಗಳಿವೆ. ರಾಜನೆಂಬವನು ಅರಿಷಡ್ವರ್ಗಗಳನ್ನು ಗೆಲ್ಲಬೇಕು, ಪರಪೀಡನೆಯನ್ನು ಮಾಡಬಾರದು, ಅವನಿಗೆ ದಯೆ, ಕ್ಷಮೆ, ಶಮದಮಗಳು ಸದ್ಗುಣಗಳು ಎಂದೇ ಈ ಧರ್ಮವು ಸಾರುತ್ತದೆ. ಅಧ್ಯಾತ್ಮ ಸಾಧನೆಯನ್ನು ಗೈದು ಕಮಲದೆಲೆಯ ಮೇಲಿನ ಜಲಬಿಂದುಗಳಂತೆ ಜೀವನ ನಡೆಸಿದ ರಾಜರ್ಷಿಗಳು ಮಹಾಭಾರತದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾರೆ. ಇವೆಲ್ಲವೂ ಕ್ಷಾತ್ರ ಧರ್ಮದೊಳಗೆ ಬರುವುದಿಲ್ಲವೆ? ಕ್ಷಾತ್ರ ಧರ್ಮವನ್ನೇ ನಿರ್ದಿಷ್ಟವಾಗಿ ಇಟ್ಟುಕೊಂಡರೂ ಒಂದೆಡೆ ಯುದ್ಧಮಾಡುವಾಗ ಶರಣಾಗತನಾದ ಶತ್ರುವನ್ನು ಕ್ಷಮಿಸಬೇಕು, ದಯೆ ತೋರಬೇಕು ಎಂಬ ಹೇಳಿಕೆಗಳೂ ಮತ್ತೊಂದೆಡೆ ಶತ್ರುವಿನ ಮೇಲೆ ಯಾವ ಕಾರಣಕ್ಕೂ ದಯೆ ತೋರಿಸಬಾರದು, ಮೂಲೋತ್ಪಾಟನೆ ಮಾಡಿಬಿಡಬೇಕು ಎಂಬ ಹೇಳಿಕೆಗಳೂ ಬರುತ್ತವೆ. ಹಾಗಾದರೆ ಈ ಮೇಲಿನ ಹೇಳಿಕೆಗಳನ್ನು ಹೇಗೆ ಅರ್ಥೈಸಬೇಕು? ಅಂದರೆ ಧರ್ಮವನ್ನು ಯಾವುದೇ ಸಿದ್ದ ನಿಯಮಗಳನ್ನು ಹಾಕಿಕೊಂಡು ನಿರ್ಣಯಿಸುವುದು ಸಾಧ್ಯವಿಲ್ಲ, ಬದಲಾಗಿ ಅದು ಮನುಷ್ಯನ ವಿವೇಚನೆಯನ್ನಾಧರಿಸಿರಬೇಕು. ಬ್ರಾಹ್ಮಣರು ಹಾಗೂ ಸನ್ಯಾಸಿಗಳು ಭಿಕ್ಷಾವೃತ್ತಿಯನ್ನು ಮಾಡುವುದು ಶ್ಲಾಘನೀಯ ಅಂದಾಕ್ಷಣ ಯುದ್ಧಮಾಡುವುದು ಅವರಿಗೆ ಅಧರ್ಮವಾಗಿತ್ತು, ಅವರಿಗೆ ಹಿಂಸೆ ಕರ್ತವ್ಯವಲ್ಲ ಎಂದು ಮಹಾಭಾರತ ತಿಳಿಸುತ್ತದೆ ಎನ್ನುವಂತಿಲ್ಲ. ಹಿಂಸೆ ಯಾವುದು ಎಂಬುದಕ್ಕೂ ಏಕೈಕ ಮಾನದಂಡವಿಲ್ಲ. ಹಾಗಾಗಿ ಹಿಂಸೆ ಧರ್ಮವೆ ಅಧರ್ಮವೆ ಎಂಬ ಪ್ರಶ್ನೆಯನ್ನು ವಿವೇಚನೆಗೊಳಪಡಿಸಿ ನಿರ್ಣಯಿಸಬೇಕೇ ಹೊರತೂ ಸಂದರ್ಭಕ್ಕೆ ಹೊರತಾದ ಉತ್ತರವನ್ನು ನೀಡುವ ಸಾಧ್ಯತೆಯಿಲ್ಲ. ಒಂದು ಸಮಾಜದ ಇಹ ಪರಗಳ ಅಗತ್ಯಗಳೆರಡನ್ನೂ ನಿಭಾಯಿಸುವಂತೆ ಈ ವ್ಯತ್ಯಾಸಗಳನ್ನು ಮಾಡಿಕೊಳ್ಳಬೇಕು ಎಂಬುದು ಈ ಹೇಳಿಕೆಗಳ ಸೂಚನೆ. ಹಾಗಾಗಿ ನಮ್ಮ ಯಾವುದೊ ಗ್ರಂಥದ ಯಾವುದೋ ಸಾಲನ್ನು ತೆಗೆದುಕೊಂಡು ಅದು ಮನುಷ್ಯರೆಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮ ಎಂದರೆ ಅವಾಸ್ತವಿಕವಾಗುತ್ತದೆ. ಒಂದು ನಿರ್ದಿಷ್ಟ ಸಂದರ್ಭದಲ್ಲಿ ಎದ್ದಿರಬಹುದಾದ ಧರ್ಮ ಜಿಜ್ಞಾಸೆಗಳನ್ನು ಹಾಗೂ ನಿರ್ಣಯಗಳನ್ನು ಅವು ನಮಗೆ ಪರಿಚಯಿಸುತ್ತಿರುತ್ತವೆ.


ಪ್ರೊ. ರಾಜಾರಾಮ ಹೆಗಡೆ

ಮೂಲತ: ಶಿರಸಿ ಸಮೀಪದ ಸಿದ್ದಾಪುರದ ಐನಕೈಯವರಾದ ಶ್ರೀಯುತರು, ಪೂನಾದ ಡೆಕ್ಕನ್ ಕಾಲೇಜಿನಲ್ಲಿ ಪ್ರಾಚೀನ ಭಾರತ ಚರಿತ್ರೆ, ಸಂಸ್ಕೃತಿ ಮತ್ತು ಪ್ರಾಕ್ತನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಪಿ.ಹೆಚ್.ಡಿ. (೧೯೭೯-೧೯೮೭) ಪದವಿಗಳನ್ನು ಪಡೆದವರು. ೧೯೮೮ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇರಿದರು. ವೃತ್ತಿ ಜೀವನದ ಆರಂಭದಲ್ಲಿ ಪ್ರಾಕ್ತನಶಾಸ್ತ್ರದಲ್ಲಿ ಹೆಚ್ಚು ಆಸಕ್ತರಾಗಿದ್ದ ಇವರು ಐ.ಸಿ.ಹೆಚ್.ಆರ್., ಯುರೋಪಿಯನ್ ಕಮಿಷನ್ ಮತ್ತು ಫೋರ್ಡ್ ಫೌಂಡೇಷನ್‌ಗಳ ಧನ ಸಹಾಯದೊಂದಿಗೆ ಆ ವಿಷಯದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. ಕೆಲವು ಕಾಲಾನಂತರ ಪ್ರಾಕ್ತನಶಾಸ್ತ್ರದಿಂದ ತಮ್ಮ ಅಧ್ಯಯನದ ಗಮನವನ್ನು ಮಧ್ಯಕಾಲೀನ ಕರ್ನಾಟಕ ಚರಿತ್ರೆಯ ಕಡೆಗೆ ಹರಿಸಿದರು. ಅಲ್ಲಿ ಅವರು ನಡೆಸಿದ ಅಧ್ಯಯನದ ಪರಿಣಾಮವಾಗಿ ಭಾರತೀಯ ಇತಿಹಾಸ, ಸಮಾಜ, ಸಂಸ್ಕೃತಿಗಳ ಕುರಿತ ವಸಾಹತು ಸಂಕಥನಗಳ ಬಗ್ಗೆ ಆಸಕ್ತರಾದರು. ಇದೇ ಸಂದರ್ಭದಲ್ಲಿ ಎಸ್.ಎನ್. ಬಾಲಗಂಗಾಧರರ ಸಂಪರ್ಕಕ್ಕೆ ಬಂದ ಶ್ರೀಯುತರು, ಭಾರತೀಯ ನಿರೂಪಣೆಗಳ ಕುರಿತು ಆಳವಾದ ಅಧ್ಯಯನ ಮಾಡಿದರು. ಶ್ರೀಯುತರು "The Heathen in his Blindness: Asia, the West and the Dynamic of Religion" ಅನ್ನು ಕನ್ನಡಕ್ಕೆ "ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ" ಎಂಬ ಶೀಷಿಕೆಯಡಿಯಲ್ಲಿ ಅನುವಾದಿಸಿದರು. ಇದಲ್ಲದೆ ಇವರು ‘ಬೌದ್ಧಿಕ ದಾಸ್ಯದಲ್ಲಿ ಭಾರತ’, ‘ಬುದ್ಧಿಜೀವಿಗಳ ಮೂಢನಂಬಿಕೆಗಳು’, ‘ದಾರಿ ತಪ್ಪಿದ ಸಂಸ್ಕೃತಿ ಚಿಂತನೆ‘, ‘ಪಶ್ಚಿಮಾಯನ’ ಮೊದಲ ಮಹತ್ತ್ವಪೂರ್ಣಕೃತಿಗಳನ್ನು ರಚಿಸಿದ್ದಾರೆ.

Subscribe For Newsletter

    About Us

    The Samhati Foundation established the Foundation for the Study of Indian Culture (FSIC: https://fsic.in/) a research division dedicated to the scientific study of Indian culture and traditions..

    Email Us: director@fsic.in

    Samhati  @2026. All Rights Reserved.

    Discover more from Samhati

    Subscribe now to keep reading and get access to the full archive.

    Continue reading