Contact Info

  • ADDRESS: Foundation for Study of Indian Culture
    (A Division of Samhati Foundation)
    # 100, Sri Kudli Shankaracharya Maha Samsthanam,
    Vani Villasa Road, Opposite Lalbagh West Gate,
    V.V. Puram, Basavanagudi,
    Bengaluru – 560004

  • PHONE: +91 7349127979

  • E-MAIL: fsic.bengaluru@gmail.com

Some Populer Post

  • Home  
  • ಜಾತಿ ವ್ಯವಸ್ಥೆಯ ಕಥೆಯನ್ನು ಸಾಮಾಜಿಕ ಸಿದ್ಧಾಂತವೆನ್ನಬಹುದೆ?
- Articles - ಬುದ್ಧಿಜೀವಿಗಳ ಮೂಢನಂಬಿಕೆಗಳು

ಜಾತಿ ವ್ಯವಸ್ಥೆಯ ಕಥೆಯನ್ನು ಸಾಮಾಜಿಕ ಸಿದ್ಧಾಂತವೆನ್ನಬಹುದೆ?

ಜಾತಿ ವ್ಯವಸ್ಥೆ ಎಂಬ ಶಬ್ದ ನಮಗೆಲ್ಲ ಚಿರ ಪರಿಚಿತವಾದದ್ದು. ಅದು ಕೇವಲ ಭಾರತದಲ್ಲೇ ಇದೆ ಎಂದೂ ಹೇಳುತ್ತೇವೆ. ಏನು ಈ ಜಾತಿವ್ಯವಸ್ಥೆ ಎಂಬುದಾಗಿ ಕೇಳಿದರೆ ಬ್ರಿಟಿಷರ ಕಾಲದ ಒಂದು ಕಥೆಯನ್ನು ಹೇಳುತ್ತೇವೆಯೇ ವಿನಃ ಅದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ  ವಿಫಲರಾಗುತ್ತೇವೆ. ಈ ಕಥೆಯ ಸಮಸ್ಯೆ ಏನು ಎಂಬ ಕುರಿತು ಗಮನಸೆಳೆಯುವುದು ಈ ಲೇಖನದ ಉದ್ದೇಶ. ಕೆಲವು ವರ್ಷಗಳ ಹಿಂದಿನ ಮಾತು. ಆಗಿನ್ನೂ ಕರ್ನಾಟಕದಲ್ಲಿ ಒಂದು ಸಂಶೋಧನಾ ತಂಡವನ್ನು ಕಟ್ಟಲು ಪ್ರಾರಂಭಿಸಿದ್ದೆ. ಆ ಸಂದರ್ಭದಲ್ಲೇ ಒಂದು ಸಭೆಯಲ್ಲಿ ಒಬ್ಬ ಸಾಹಿತಿಗಳು […]

ಜಾತಿ ವ್ಯವಸ್ಥೆ ಎಂಬ ಶಬ್ದ ನಮಗೆಲ್ಲ ಚಿರ ಪರಿಚಿತವಾದದ್ದು. ಅದು ಕೇವಲ ಭಾರತದಲ್ಲೇ ಇದೆ ಎಂದೂ ಹೇಳುತ್ತೇವೆ. ಏನು ಈ ಜಾತಿವ್ಯವಸ್ಥೆ ಎಂಬುದಾಗಿ ಕೇಳಿದರೆ ಬ್ರಿಟಿಷರ ಕಾಲದ ಒಂದು ಕಥೆಯನ್ನು ಹೇಳುತ್ತೇವೆಯೇ ವಿನಃ ಅದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ  ವಿಫಲರಾಗುತ್ತೇವೆ. ಈ ಕಥೆಯ ಸಮಸ್ಯೆ ಏನು ಎಂಬ ಕುರಿತು ಗಮನಸೆಳೆಯುವುದು ಈ ಲೇಖನದ ಉದ್ದೇಶ.

ಕೆಲವು ವರ್ಷಗಳ ಹಿಂದಿನ ಮಾತು. ಆಗಿನ್ನೂ ಕರ್ನಾಟಕದಲ್ಲಿ ಒಂದು ಸಂಶೋಧನಾ ತಂಡವನ್ನು ಕಟ್ಟಲು ಪ್ರಾರಂಭಿಸಿದ್ದೆ. ಆ ಸಂದರ್ಭದಲ್ಲೇ ಒಂದು ಸಭೆಯಲ್ಲಿ ಒಬ್ಬ ಸಾಹಿತಿಗಳು ಈ ಶತಮಾನದ ಕೆಲವು ನಿರ್ಲಜ್ಜ ಸಂಗತಿಗಳನ್ನು ಶ್ರೋತೃಗಳ ಮುನ್ನೆಚ್ಚರಿಕೆಗಾಗಿ ಪಟ್ಟಿ ಮಾಡಿ ಕೊಟ್ಟರಂತೆ. ಆ ಪಟ್ಟಿಯಲ್ಲಿ ನನ್ನ ಸಂಶೋಧನೆಯನ್ನು ಎರಡನೆಯ ಸ್ಥಾನದಲ್ಲೋ ಮೂರನೆಯ ಸ್ಥಾನದಲ್ಲೋ ಉಲ್ಲೇಖಿಸಿದ್ದರಂತೆ. ನಾಲ್ಕನೆಯ ಸ್ಥಾನದಲ್ಲಿ ಯಾವುದೂ ಇರಲಿಲ್ಲ ಎಂಬುದನ್ನು ಕೇಳಿದಂತೆ ಅಸ್ಪಷ್ಟ ನೆನಪು. ಅಷ್ಟೇ ಅಲ್ಲದೇ ಅವರು ಈ ಸಂಶೋಧನೆಯನ್ನು ಹೇಗಾದರೂ ತಡೆಯಬೇಕು ಎಂಬುದಾಗಿ ಬಹಿರಂಗವಾಗಿ ಕರೆಯನ್ನು ಕೂಡ ಕೊಟ್ಟರಂತೆ. ಇದನ್ನು ಮಿತ್ರರೊಬ್ಬರು ನನಗೆ ತಿಳಿಸಿದರು. ನನಗೆ ಗಾಬರಿಯಾಯಿತು. ನನ್ನ ವಿದ್ಯಾರ್ಥಿಗಳೇನಾದರೂ ನನ್ನ ಗಮನಕ್ಕೆ ಬರದಂತೆ ಸಾರ್ವಜನಿಕವಾಗಿ ನಿರ್ಲಜ್ಜ ವ್ಯವಹಾರಗಳನ್ನು ನಡೆಸಿದ್ದಾರೆಯೆ  ಎಂದು ವಿಚಾರಿಸಿದಾಗ  ನಾನು ಜಾತಿ ವ್ಯವಸ್ಥೆ ಇಲ್ಲವೆಂದು ಹೇಳಿದ್ದೇ ಆ ನಿರ್ಲಜ್ಜ ಸಂಗತಿ ಎಂಬುದಾಗಿ ತಿಳಿಯಿತು. ಇದುವರೆಗೆ ಒಪ್ಪಿತವಾದ ಸಿದ್ಧಾಂತವನ್ನು ಸುಳ್ಳು ಎಂಬುದಾಗಿ ತೋರಿಸುವುದು ಸಂಶೋಧನೆಯ ಜೀವಂತಿಕೆಯ ಲಕ್ಷಣ. ಇದರಲ್ಲಿ ನಿರ್ಲಜ್ಜತೆ ಏನು ಬಂತು ಎಂಬ ಒಗಟು ನನಗಿನ್ನೂ ಬಗೆಹರಿದಿಲ್ಲ.

               ಈ ಜಾತಿ ವ್ಯವಸ್ಥೆ ಎಂಬ ಸಿದ್ಧಾಂತವು ಏನು ಹೇಳುತ್ತದೆ? ವೇದಕಾಲದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನು ತನ್ನ ಶುದ್ಧ ರೂಪದಲ್ಲಿ ಇತ್ತು, ನಂತರ ಬ್ರಾಹ್ಮಣ ಪುರೋಹಿತಶಾಹಿಯು ತನ್ನ ಲಾಭಕ್ಕಾಗಿ ತರತಮಗಳನ್ನು ಸೃಷ್ಟಿಸಿ   ವರ್ಣ ವಿಭಜನೆಯನ್ನು ಹುಟ್ಟುಹಾಕಿತು, ಆದು ಮೇಲು ಕೀಳೆಂಬ ಜಾತಿ ವ್ಯವಸ್ಥೆಯ ಮೂಲತತ್ವವಾಗಿ ಹಿಂದೂಯಿಸಂನಲ್ಲಿ ಸೇರಿಕೊಂಡಿತು.  ಮನುಧರ್ಮಶಾಸ್ತ್ರದಲ್ಲಿ ಜಾತಿ ವ್ಯವಸ್ಥೆಯ ಕ್ರೂರ ಕಾನೂನುಗಳನ್ನು ಸೃಷ್ಟಿಸಿ ಎಲ್ಲರ ಮೇಲೆ ಹೇರಲಾಯಿತು. ತದನಂತರ ಈ ವ್ಯವಸ್ಥೆಯು ಗಟ್ಟಿಯಾಗಿ ಸಾವಿರಾರು ವರ್ಷಗಳವರೆಗೆ ಹಾಗೇ ಉಳಿದುಕೊಂಡು ಬಂದಿದೆ. ಅಂದರೆ ಜಾತಿ ವ್ಯವಸ್ಥೆ ಎಂಬ ಸಿದ್ಧಾಂತವು ತಿಳಿಸುವುದೇನೆಂದರೆ ಭಾರತದಲ್ಲಿ ಈಗ ಇರುವ ಜಾತಿ, ಮತ, ಕುಲ, ಪಂಗಡ ಇತ್ಯಾದಿ ವೈವಿಧ್ಯಪೂರ್ಣವಾದ ಸಾಮಾಜಿಕ ಗುಂಪುಗಳು ಯಾರದೋ ಲಾಭಕ್ಕಾಗಿ ಮಾಡಿಕೊಂಡ ಒಂದು ವ್ಯವಸ್ಥೆ. ಹಾಗೂ ಉಳಿದವರ ಮೇಲೆ ಒತ್ತಾಯದಿಂದ ಹೇರಿದ ಒಂದು ವ್ಯವಸ್ಥೆ.  ಈ ವ್ಯವಸ್ಥೆಯಿಂದ ಮೇಲಿನ ಜಾತಿಗಳಿಗೆಲ್ಲ ಲಾಭವಾಗುತ್ತದೆ, ಕೆಳಗಿನ ಜಾತಿಗಳಿಗೆಲ್ಲ ಇದು ಶೋಷಣೆ. 

               ಈ ಕಥೆಯನ್ನು ಜಾತಿ ವ್ಯವಸ್ಥೆಯ ಸಿದ್ಧಾಂತ ಎಂದು ಸೂಚಿಸುತ್ತಿದ್ದೇನೆ. ನಿಮಗೆ ಈ ಕಥೆ ಗೊತ್ತಿದೆಯೊ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹೌದು ಅಂತಾದರೆ ನಿಮಗೂ ಆ ಸಿದ್ಧಾಂತವು ಗೊತ್ತಿದೆ ಎಂದರ್ಥ. ಏಕೆ ಈ ವಿಷಯವನ್ನು ಹೀಗೆ ಪರಿಚಯಿಸುವ ಪ್ರಸಂಗ ಬಂದಿದೆಯೆಂದರೆ ಕನ್ನಡದಲ್ಲಿ ಅನೇಕರು ಇಂದಿಗೂ ಕೂಡ ನಾನು ಏನು ಹೇಳುತ್ತಿದ್ದೇನೆಂಬುದನ್ನು ಗ್ರಹಿಸಿದಂತಿಲ್ಲ ಅಥವಾ ಗ್ರಹಿಸಿಲ್ಲವೆಂಬಂತೆ ತೋರಿಸಿಕೊಳ್ಳುತ್ತಿದ್ದಾರೆ. ನಾನು ಭಾರತದಲ್ಲಿ ಜಾತಿಗಳೇ ಇಲ್ಲವೆಂದು ಹೇಳುತ್ತಿದ್ದೇನೆ ಎಂಬುದಾಗಿ ಪ್ರಚಾರ ನಡೆಸಿ ನನ್ನ ಬುದ್ಧಿಮತ್ತೆಯನ್ನೇ ಲೇವಡಿ ಮಾಡಲು ಪ್ರಯತ್ನಿಸಿದರು. ನಾನು ನಮ್ಮ ಸಮಾಜದಲ್ಲಿರುವ ದೌರ್ಜನ್ಯವನ್ನು ಸಮರ್ಥಿಸುತ್ತಿದ್ದೇನೆ ಎಂದು ಖಳನಾಯಕ ಪಟ್ಟವನ್ನು ನೀಡಲು ಪ್ರಯತ್ನಿಸಿದರು. ನಾನು ವಸಾಹತೋತ್ತರ ಚಿಂತಕರ ಹೇಳಿಕೆಗಳನ್ನು ಪಠಿಸುತ್ತಿದ್ದೇನೆ ಎಂಬುದಾಗಿ ನನ್ನ ಹೇಳಿಕೆಯನ್ನು ಗೌಣಮಾಡಲು ಪ್ರಯತ್ನಿಸಿದರು. ಇದೆಲ್ಲ ಪ್ರಗತಿಪರರ ಕಥೆಯಾಯಿತು. ಹೋಗಲಿ, ಅವರಿಂದ ಪ್ರತಿಗಾಮಿಗಳು ಎಂದು ಪಟ್ಟಕಟ್ಟಿಸಿಕೊಂಡ ಹಿಂದುತ್ವವಾದಿಗಳು ಹಾಗೂ ಜಾತಿಯ ಆಚರಣೆಗಳನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದ ಸಂಪ್ರದಾಯಸ್ಥರೇನು ನನ್ನ ಹೇಳಿಕೆಯನ್ನು ಕೇಳಿ ಸಿಹಿ ಹಂಚಿಕೊಂಡು ಖುಷಿಪಟ್ಟರೆ? ಅವರೂ ಕೂಡ ಆತಂಕ ಪಟ್ಟುಕೊಂಡರು. ಹಾಗಾದರೆ ನಮ್ಮ ಭಾರತೀಯ ಸಮಾಜವು ಅವ್ಯವಸ್ಥಿತವಾಗಿದೆಯೆ? ನಮ್ಮ ಸಮಾಜದಲ್ಲಿ ನಾಲ್ಕು ವರ್ಣಗಳಿವೆ ಎಂಬುದಾಗಿ ನಮ್ಮ ಪ್ರಾಚೀನ ಗ್ರಂಥಗಳು ಹೇಳುವುದು ಸುಳ್ಳೆ? ಎಂದು ಕೇಳಿದ ಸಂಪ್ರದಾಯಸ್ಥರೂ ಇದ್ದಾರೆ. ಯಾರಿಗೇ ಇರಬಹುದು ನನ್ನ ಉತ್ತರ ಒಂದೇ: ಈ ಮೇಲಿನ ಕಥೆ ನಿಜವಾಗಲಿಕ್ಕೆ ಸಾಧ್ಯವಿಲ್ಲ. 

                ನಿಮ್ಮ ಸುತ್ತುಮುತ್ತಲೇ ಇರುವ ಅಸಂಖ್ಯಾತ ಜಾತಿ, ಮತ ಇತ್ಯಾದಿ ಗುಂಪುಗಳನ್ನು ನಾಲ್ಕು ವರ್ಣಗಳಲ್ಲಿ ಗುರುತಿಸುತ್ತಾ ಹೋಗಿ. ಕೊನೆಗೆ ಅವುಗಳಲ್ಲಿ ಬಹುಪಾಲು ಜಾತಿಗಳು ಈ ನಾಲ್ಕು ವರ್ಣಗಳಲ್ಲಿ ಯಾವುದಕ್ಕೂ ಸೇರುವುದಿಲ್ಲ ಎಂಬುದನ್ನು ಕಂಡುಕೊಳ್ಳುತ್ತೀರಿ. ಹಾಗಾಗಿ ಈಗ ನಾವು ನೋಡುತ್ತಿರುವುದು ವರ್ಣ ವ್ಯವಸ್ಥೆಯಂತೂ ಅಲ್ಲ. ಈ ವಾಸ್ತವವನ್ನು ಒಪ್ಪಿಕೊಳ್ಳಲಾರದವರು ಒಮ್ಮೆ ಇದ್ದ ವರ್ಣ ವ್ಯವಸ್ಥೆಯು ಕಾಲಾಂತರದಲ್ಲಿ ಶಿಥಿಲವಾಗಿ ಇಂದಿನ ಜಾತಿ ವ್ಯವಸ್ಥೆಯಾಗಿದೆ ಎಂದು ಸಮಜಾಯಿಷಿ ನೀಡುತ್ತಾರೆ. ಆ ಶಿಥಿಲವಾಗುವ ಪ್ರಕ್ರಿಯೆಯು ನಿರ್ದಿಷ್ಟವಾಗಿ ಎಲ್ಲಿಂದ ಹೇಗೆ ಪ್ರಾರಂಭವಾಯಿತು, ವರ್ಣ ಹೇಗೆ ಜಾತಿಯಾಯಿತು ಎಂಬುದಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಸುಸಂಬದ್ಧವಾದ ವಿವರಣೆಗಳು ಇದುವರೆಗೆ ಸಮಾಜ ಶಾಸ್ತ್ರಜ್ಞರಿಂದ ಬಂದಿಲ್ಲ. ಹಾಗಾಗಿ ಪ್ರಾಚೀನ ಕಾಲದಲ್ಲಾದರೂ ನಮ್ಮ ಸಮಾಜವು ಬೇರೆ ರೀತಿ ಇತ್ತು ಎಂಬುದಕ್ಕೆ ಆಧಾರಗಳಿವೆಯೆ? ಈ ಹೇಳಿಕೆಗೆ ಕೆಲವು ಉಪಕಥೆಗಳನ್ನು ಬಿಟ್ಟರೆ ಇನ್ನೂ ಯಾವುದೇ ಖಚಿತವಾದ ಆಧಾರವನ್ನು ಯಾರೂ ತೋರಿಸಿಲ್ಲ. ಅಷ್ಟಲ್ಲದೇ ಈ ವರ್ಣ ವ್ಯವಸ್ಥೆಯನ್ನು ಆರ್ಯ ಬ್ರಾಹ್ಮಣರು ದರ್ಜಿಯೊಬ್ಬನು ಅಂಗಿಯನ್ನು ಹೊಲಿದ ರೀತಿಯಲ್ಲೇ ರಚಿಸಿ ಸಮಾಜಕ್ಕೆ ತೊಡಿಸಿದ್ದಾರೆ ಎಂದು ಆಣೆ ಮಾಡಿ ಕೂಡ ಹೇಳುತ್ತಾರೆ.  ಅಂದರೆ ಎಲ್ಲರದೂ ಒಂದೇ ಕಥೆ: ಯಾರೋ ಈ ಸಮಾಜವನ್ನು ಹೀಗೆ ವ್ಯವಸ್ಥಿತಗೊಳಿಸಿ ನಿಯಮಗಳನ್ನು ವಿಧಿಸಿದ್ದಾರೆ, ಆ ನಿಯಮಗಳ ಪ್ರಕಾರವೇ ಎಲ್ಲರೂ ಜಾತಿಭೇದವನ್ನು, ದೌರ್ಜನ್ಯವನ್ನು ಒಪ್ಪಿಕೊಂಡಿದ್ದಾರೆ.

               ಈ ಕಥೆಯನ್ನು ಪ್ರಸ್ನಿಸಿದರೆ ಏಕೆ ಇಷ್ಟು ಪ್ರತಿರೋಧ ಹುಟ್ಟುತ್ತಿದೆ? ಇದು ನಿರ್ಲಜ್ಜ ಸಂಗತಿ ಏಕಾಗುತ್ತದೆ? ಅನೀತಿ ಹಾಗೂ ಅನ್ಯಾಯದ ಪರ ವಹಿಸಿ ಮಾತನಾಡಿದಂತೆ ಹೇಗಾಗುತ್ತದೆ? ಅಂದರೆ ಇಲ್ಲಿ  ಎರಡು ಬೇರೆ ಬೇರೆ ಸಂಗತಿಗಳನ್ನು ಪರಸ್ಪರ ಕಾರ್ಯ-ಕಾರಣಗಳಂತೆ ಜೋಡಿಸುತ್ತಿದ್ದಾರೆ. ಅವೆಂದರೆ ಜಾತಿ ವ್ಯವಸ್ಥೆಯ ಕುರಿತ ಕಥೆ ಹಾಗೂ ಭಾರತೀಯ ಸಮಾಜದಲ್ಲಿ ಇದೆ ಎನ್ನಲಾಗುವ ಅನ್ಯಾಯ ಹಾಗೂ ದೌರ್ಜನ್ಯಗಳು. ಜಾತಿವ್ಯವಸ್ಥೆಯೇ ಈ ದೌರ್ಜನ್ಯಗಳಿಗೆ ಕಾರಣ ಎಂಬುದಾಗಿ ಕಳೆದ ನೂರಾರು ವರ್ಷಗಳಿಂದ  ನಂಬಿಕೊಂಡು ಬರಲಾಗಿದೆ. ಹಾಗಾಗಿ ಜಾತಿ ವ್ಯವಸ್ಥೆ ಇಲ್ಲವೆಂದಾಕ್ಷಣ ಈ ದೌರ್ಜನ್ಯವನ್ನು ಸಮರ್ಥಿಸಲಿಕ್ಕಾಗಿ ಅದರ ಕಾರಣವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಗುಮಾನಿ ಹುಟ್ಟುತ್ತದೆ. ಏಕೆ ಮರೆಮಾಚುತ್ತಿದ್ದಾರೆಂದರೆ ಇವರಿಗೇನೋ ಹಿತಾಸಕ್ತಿ ಇದೆ ಎಂಬುದಾಗಿ ಭಾವಿಸಿಕೊಳ್ಳುತ್ತಾರೆ. ಈ ಕಥೆಯನ್ನು ತಿರಸ್ಕರಿಸುವವರು ಬ್ರಾಹ್ಮಣರೇ ಆಗಿದ್ದರಂತೂ ಈ ಕಥೆಗೆ ಅದು ಸರಿಯಾಗಿಯೇ ಹೊಂದುತ್ತದೆ.

               ಜಾತಿ ವ್ಯವಸ್ಥೆ ಭಾರತಕ್ಕೇ ವಿಶಿಷ್ಟವಾದುದು. ಹಾಗೂ ಅದು ಹುಟ್ಟುಹಾಕುತ್ತಿರುವ ದೌರ್ಜನ್ಯ ಕೂಡ ಭಾರತಕ್ಕೇ ವಿಶಿಷ್ಟವಾದುದು ಎನ್ನಲಾಗುತ್ತದೆ. ಪ್ರಪಂಚದ ಬೇರೆ ಯಾವ ದೇಶದಲ್ಲೂ ಇಂಥ ಕ್ರೂರ ವ್ಯವಸ್ಥೆ ಇಲ್ಲ ಎನ್ನಲಾಗುತ್ತದೆ. ಭಾರತೀಯ ಮುಸ್ಲಿಂ, ಕ್ರೈಸ್ತರನ್ನೂ ಈ ಅನಿಷ್ಟ ಬಿಟ್ಟಿಲ್ಲ ಎನ್ನಲಾಗುತ್ತದೆ. ಈ ಹೇಳಿಕೆ ಎಷ್ಟು ಹಾಸ್ಯಾಸ್ಪದವಾಗಿದೆ ಎಂಬುದಕ್ಕೆ ಈ ಮುಂದಿನ ಸಂಗತಿಯನ್ನು ಗಮನಿಸಿ: ೧೯೪೭ರ ವರೆಗೆ ಬ್ರಿಟಿಷರು ಆಳುತ್ತಿದ್ದ ಭಾರತದಲ್ಲಿ ಇಂದಿನ ಬಾಂಗ್ಲಾದೇಶ, ಪಾಕಿಸ್ತಾನಗಳೂ ಸೇರಿಕೊಂಡಿದ್ದವು. ಆಗಲೂ ಜಾತಿ ವ್ಯವಸ್ಥೆ ಭಾರತದ ವೈಶಿಷ್ಟ್ಯ ಎಂಬುದಾಗಿ ಎಲ್ಲ ವಿದ್ವಾಂಸರೂ ಹೇಳಿದ್ದಾರೆ. ಆ ದೇಶಗಳು ಈಗ ಭಾರತದಿಂದ ಬೇರ್ಪಟ್ಟಿವೆ. ಆದರೆ ಇಂದು ಜಾತಿ ವ್ಯವಸ್ಥೆ ಈ ಎಲ್ಲಾ ದೇಶಗಳ ವೈಶಿಷ್ಟ್ಯ ಎಂಬುದಾಗಿ ಯಾರೂ ಹೇಳುತ್ತಿಲ್ಲ. ಕೇವಲ ಇಂದಿನ ಭಾರತದಲ್ಲಿ ಮಾತ್ರವೇ ಈ ಅನಿಷ್ಟ ಪದ್ಧತಿ ಇದೆ ಎನ್ನಲಾಗುತ್ತದೆ. ಅದು ಹೇಗೆ ಭಾರತದ   ನಕಾಶೆ ಬದಲಾದ ತಕ್ಷಣ ಈ ಜಾತಿವ್ಯವಸ್ಥೆ ಈಗಿನ ಭಾರತಕ್ಕೆ ಮಾತ್ರ ತನ್ನನ್ನು ಸಂಕುಚಿಸಿಕೊಂಡು ಬಿಡುತ್ತದೆ?  ಉಳಿದ ಭಾಗಗಳಲ್ಲಿ ಮಾಯವಾಗಿ ಹೋಗುತ್ತದೆ? ವಿದ್ವಾಂಸರು ಈ ಕಥೆಯನ್ನು ಎಷ್ಟು ಹಗುರಾಗಿ ಪರಿಗಣಿಸಿದ್ದಾರೆ ಎಂಬುದಕ್ಕೆ ಇದೊಂದು ದೃಷ್ಟಾಂತ. ಇಂಥ ಪ್ರಶ್ನೆಗಳು ಅದನ್ನು ನಂಬುವವರಿಗೇ ಬೇಡವಾದ ಮೇಲೆ ವಿದ್ವಾಂಸರ ಕೆಲಸ ಮತ್ತಷ್ಟು ಸುಲಭವಾದಂತೇ.

               ಇದು ಒಂದು ವಿಚಾರವಾದರೆ ಇನ್ನೊಂದು ಮುಖ್ಯ ಪ್ರಶ್ನೆ ಇದೆ. ಜಾತಿ ವ್ಯವಸ್ಥೆಗೇ ವಿಶಿಷ್ಟವಾದ ಅನಿಷ್ಟ ಪದ್ಧತಿಗಳು ಯಾವವು ಎನ್ನುತ್ತಾರೆ? ಮೇಲು-ಕೀಳು ಭಾವನೆ, ಪ್ರತ್ಯೇಕತೆ, ಸಾಮಾಜಿಕ ಸಂಘರ್ಷ, ಕ್ರೌರ್‍ಯ, ಹಿಂಸೆ, ಶೋಷಣೆ ಇತ್ಯಾದಿ. ಇವೆಲ್ಲ ಜಾತಿ ವ್ಯವಸ್ಥೆಗೆ ನಿದರ್ಶನಗಳಾಗುವುದಾದರೆ ಇವು ಪ್ರಪಂಚದ ಎಲ್ಲಾ ಸಮಾಜಗಳಲ್ಲೂ ಇರುವಂಥವೇ. ಹಾಗಾಗಿ ಜಾತಿ ವ್ಯವಸ್ಥೆ ಎಲ್ಲ ದೇಶಗಳಲ್ಲೂ ಇಲ್ಲವೆಂದು ಹೇಗೆ ಹೇಳುತ್ತೀರಿ?   ಅಂದರೆ ಈ ಮೇಲಿನ ಕಟ್ಟು ಕಥೆಯನ್ನು ಬಿಟ್ಟರೆ ಭಾರತಕ್ಕೇ ವಿಶಿಷ್ಟವಾದದ್ದು ಏನಿದೆ ಎಂಬುದು ಸ್ಪಷ್ಟವಿಲ್ಲ. ಭಾರತದಲ್ಲೂ ಕೂಡ ಈ ಮೇಲಿನ ದುರ್ಗುಣಗಳು ಯಾವುದೇ ಜಾತಿಯ ಸೊತ್ತು ಎನ್ನಲು ಆಧಾರಗಳಿವೆಯೆ?  ಜಾತಿ ವ್ಯವಸ್ಥೆಯ ಕಥೆಯನ್ನು ನಿಜ ಎಂದುಕೊಂಡರೆ ಕೇವಲ ಮೇಲ್ಜಾತಿಯವರು ಮಾತ್ರವೇ ಕೆಳಜಾತಿಯವರ ಮೇಲೆ   ದೌರ್ಜನ್ಯಗಳನ್ನು ನಡೆಸಬೇಕು. ಈ ಮುಂದಿನ ದೌರ್ಜನ್ಯಗಳು ಇರಬಾರದು: ೧. ಕೆಳಜಾತಿಯವರು ತಮಗಿಂತ ಕೆಳಜಾತಿಯವರ ಮೇಲೆ ನಡೆಸುವ ದೌರ್ಜನ್ಯ. ೨. ಕೆಳಜಾತಿಯವರು ಮೇಲ್ಜಾತಿಯವರ ಮೇಲೆ ನಡೆಸುವ ದೌರ್ಜನ್ಯ. ಹಾಗೂ ೩. ಆಯಾ ಜಾತಿಯವರು ಆಯಾ ಜಾತಿಯವರ ಮೇಲೆ ನಡೆಸುವ ದೌರ್ಜನ್ಯ. ಏಕೆಂದರೆ ಈ ಮೂರೂ ಪ್ರಕಾರದ ದೌರ್ಜನ್ಯಗಳನ್ನು ಜಾತಿ ವ್ಯವಸ್ಥೆಯ ಕುರಿತ ಕಥೆಯಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಷ್ಟೇ ಅಲ್ಲ, ಅವು ಈ ಕಥೆಯನ್ನು ಅಲ್ಲಗಳೆಯುತ್ತವೆ. ಆದರೆ ಇಂಥ ದೃಷ್ಟಾಂತಗಳು ಕೂಡ ನಮ್ಮ ಸಮಾಜದಲ್ಲಿ ಕಣ್ಣಿಗೆ ರಾಚುವಂತೆ ಇವೆ.

               ಈ ಕಥೆಯ ಪ್ರಕಾರ ಅವಮಾನಕರವಾದ, ಅನಾರೋಗ್ಯಕರವಾದ ಹಾಗೂ ಹಿಂಸಾತ್ಮಕವಾದ ಸಾಮಾಜಿಕ ಕಟ್ಟುಪಾಡುಗಳನ್ನು ಬ್ರಾಹ್ಮಣರು ಕೆಳಜಾತಿಯವರಿಗೆ ಮಾತ್ರವೇ ವಿಧಿಸಿ ತಾವು ಹಾಯಾಗಿ ಇರಬೇಕು. ಆದರೆ ಬ್ರಾಹ್ಮಣರೇಕೆ ಉಳಿದವರಿಗಿಂತ ಹೆಚ್ಚು ಕಟ್ಟುಪಾಡುಗಳನ್ನು ತಮಗೇ ಇಟ್ಟುಕೊಂಡಿದ್ದಾರೆ? ಬ್ರಾಹ್ಮಣರದು ಕರ್ಮಠ ಜೀವನ ಎಂದು ಅವರನ್ನು ತೆಗಳಲಿಕ್ಕೆ ಅದೊಂದು ವಸ್ತುವಾಗಿದೆಯೇ ವಿನಃ ಇಂಥ ಪ್ರಶ್ನೆಗಳನ್ನು ಯಾರೂ ಎತ್ತುವುದಿಲ್ಲ.  ಅಂದರೆ ಇವರಿಗೆಲ್ಲ ಬ್ರಾಹ್ಮಣರನ್ನು ದೂಷಿಸುವುದು ಮುಖ್ಯವೇ ಹೊರತೂ ಸತ್ಯವಲ್ಲ. ಇಂದು ಬ್ರಾಹ್ಮಣ ಜಾತಿಗಳನ್ನು ಇಂಥ ಕೆಲವು ಆಚರಣೆಗಳಿಂದ ಬಿಡಿಸಲು ನಡೆದಷ್ಟು ಚಳವಳಿಗಳು ಬೇರೆ ಜಾತಿಗಳ ಸಂದರ್ಭದಲ್ಲಿ ನಡೆದಿಲ್ಲ.   ಅದಕ್ಕಿಂತ ಮುಖ್ಯವೆಂದರೆ ಆಯಾ ಜಾತಿಯ ಕಟ್ಟುಪಾಡುಗಳನ್ನು ಅವರವರೇ ರೂಢಿಸಿಕೊಂಡು ತಲೆ ತಲಾಂತರದಿಂದ ಪಾಲಿಸಿಕೊಂಡು ಬಂದಿದ್ದಾರೆ ಎಂಬುದು ಭಾರತೀಯ ಸಮಾಜದಲ್ಲಿ ಹುಟ್ಟಿ ಬೆಳೆದ ಯಾರಿಗಾದರೂ ಇರತಕ್ಕ ಅನುಭವ. ಹೀಗಿರುವಾಗ ತಮಗೆ ತಾವೇ ಕಟ್ಟುಪಾಡುಗಳನ್ನು ಹಾಕಿಕೊಳ್ಳುವ ವ್ಯವಸ್ಥೆಯಿಂದ ಬ್ರಾಹ್ಮಣರಿಗೇನು ಲಾಭವಾಗಿರಬಹುದು? ಅದರಲ್ಲೇನು ಕುತಂತ್ರ ಇರಬಹುದು?   ಭಾರತದಲ್ಲಿ ಇರುವ ವೈವಿಧ್ಯಪೂರ್ಣವಾದ ಸಾಮಾಜಿಕ ಸಮುದಾಯಗಳು ಏಕೆ ಹಾಗಿವೆ? ಅವೇಕೆ ಕ್ರೈಸ್ತ, ಇಸ್ಲಾಂ ರಿಲಿಜನ್ನುಗಳಂತೆ ಇಲ್ಲ? ಎಂಬ ಪ್ರಶ್ನೆಯನ್ನು ಉತ್ತರಿಸುವ ಸಲುವಾಗಿ ಮೇಲಿನ ಕಥೆಯು ಪಾಶ್ಚಾತ್ಯರಿಂದ ಹುಟ್ಟಿಕೊಂಡಿದೆ. ನಮ್ಮ ಸಾಮಾಜಿಕ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಎಲ್ಲರೂ ಸದ್ಯಕ್ಕೆ ಅದನ್ನೊಂದು ಸಿದ್ಧಾಂತವೆಂದು ಬಳಸುತ್ತಿದ್ದಾರೆ. ಹಿಂದೂಯಿಸಂ ಹಾಗೂ ಅದರ ಧರ್ಮಗ್ರಂಥ, ತತ್ವಗಳು, ಅದನ್ನಾಧರಿಸಿದ ಕಾನೂನುಗಳು, ಬ್ರಾಹ್ಮಣ ಪುರೋಹಿತ ಶಾಹಿ, ಇತ್ಯಾದಿ ಸಂಗತಿಗಳು ಭಾರತದಲ್ಲಿ ನಿಜವಾಗಿಯೂ ಇಲ್ಲ ಅಂತಾದರೆ ಈ ಮೇಲಿನ ಕಥೆಯೂ ನಿಜವಾಗಲಿಕ್ಕೆ ಸಾಧ್ಯವಿಲ್ಲ.  ಏಕೆಂದರೆ ಈ   ಕಲ್ಪನೆಗಳನ್ನು ಆಧರಿಸಿಯೇ ಈ ಕಥೆಯನ್ನು ಕಟ್ಟಲಾಗಿದೆ. ನಾನು ಸಂಶೋಧನೆ ಮಾಡುತ್ತ ಮಾಡುತ್ತ ಕಂಡುಕೊಂಡದ್ದು ಕೂಡ ಅದನ್ನೇ. ನಾನೂ ಕೂಡ ಈ ಕಥೆಯನ್ನು ಅಲ್ಲಗಳೆಯಬೇಕೆಂದು ಹರಕೆ ಹೊತ್ತು ಸಂಶೋಧನೆಗೆ ತೊಡಗಿರಲಿಲ್ಲ. ಆದರೆ ಈಗ ಈ ಕಥೆಯನ್ನು ಒಪ್ಪಿಕೊಳ್ಳಬೇಕಾದರೆ ನಾನು ನನ್ನ ಇದುವರೆಗಿನ ಸಂಶೋಧನೆಯನ್ನೇ ನಿರಾಕರಿಸಬೇಕಾಗುತ್ತದೆ ಎಂಬುದಂತೂ ಸ್ಪಷ್ಟ.

Subscribe For Newsletter

    About Us

    The Samhati Foundation established the Foundation for the Study of Indian Culture (FSIC: https://fsic.in/) a research division dedicated to the scientific study of Indian culture and traditions..

    Email Us: director@fsic.in

    Samhati  @2026. All Rights Reserved.

    Discover more from Samhati

    Subscribe now to keep reading and get access to the full archive.

    Continue reading