Contact Info

  • ADDRESS: Foundation for Study of Indian Culture
    (A Division of Samhati Foundation)
    # 100, Sri Kudli Shankaracharya Maha Samsthanam,
    Vani Villasa Road, Opposite Lalbagh West Gate,
    V.V. Puram, Basavanagudi,
    Bengaluru – 560004

  • PHONE: +91 7349127979

  • E-MAIL: fsic.bengaluru@gmail.com

Some Populer Post

  • Home  
  • ಹಿಂದೂ ಶಬ್ದಕ್ಕೆ ನಕಾರಾತ್ಮಕ ಅರ್ಥವೇಕೆ?
- Articles - ದಾರಿ ತಪ್ಪಿದ ಸಂಸ್ಕೃತಿ ಚಿಂತನೆ

ಹಿಂದೂ ಶಬ್ದಕ್ಕೆ ನಕಾರಾತ್ಮಕ ಅರ್ಥವೇಕೆ?

ದಲಿತರನ್ನು ಹಿಂದೂ ಸಮಾಜದ ಒಳಗೆ ತರಬೇಕೆಂಬ ಪ್ರತಿಪಾದನೆ ಕಳೆದ ನೂರಾರು ವರ್ಷಗಳಿಂದ ನಡೆದು ಬಂದಿದೆ. ಹಿಂದೂ ಸಮಾಜದ ಐಕ್ಯತೆಯನ್ನು ಸಾಧಿಸಬೇಕೆನ್ನುವ ರಾಷ್ಟ್ರೀಯ ನಾಯಕರೆಲ್ಲರೂ ಇಂಥ ಕಾರ್ಯಕ್ರಮಗಳ ಮಹತ್ವವನ್ನು ಒಪ್ಪಿದ್ದಾರೆ. ಮತ್ತೊಂದೆಡೆ ಈ ಕಾರ್ಯಕ್ರಮವನ್ನು ಒಂದು ಹುನ್ನಾರವೆಂಬಂತೆ ನೋಡುವ ಹಾಗೂ ಆ ಕಾರಣದಿಂದ ಅದನ್ನು ತಿರಸ್ಕರಿಸುವ ಪ್ರಯತ್ನಗಳೂ ನೂರಾರು ವರ್ಷಗಳಿಂದ ನಡೆದಿವೆ. ಹುನ್ನಾರವೇಕೆಂದರೆ, ಜಾತಿ ವ್ಯವಸ್ಥೆಯ ಹಿಂದೂ ಸಮಾಜದೊಳಗೆ ದಲಿತರನ್ನು ಮತ್ತೆ ಸೇರಿಸಿ ಶೋಷಿಸುವ ಉದ್ದೇಶದಿಂದ ಸಂಪ್ರದಾಯಸ್ಥ ಹಿಂದೂಗಳು ಈ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ ಎಂಬ ಆರೋಪ. ಆದರೆ ಜಾತಿ […]

ದಲಿತರನ್ನು ಹಿಂದೂ ಸಮಾಜದ ಒಳಗೆ ತರಬೇಕೆಂಬ ಪ್ರತಿಪಾದನೆ ಕಳೆದ ನೂರಾರು ವರ್ಷಗಳಿಂದ ನಡೆದು ಬಂದಿದೆ. ಹಿಂದೂ ಸಮಾಜದ ಐಕ್ಯತೆಯನ್ನು ಸಾಧಿಸಬೇಕೆನ್ನುವ ರಾಷ್ಟ್ರೀಯ ನಾಯಕರೆಲ್ಲರೂ ಇಂಥ ಕಾರ್ಯಕ್ರಮಗಳ ಮಹತ್ವವನ್ನು ಒಪ್ಪಿದ್ದಾರೆ. ಮತ್ತೊಂದೆಡೆ ಈ ಕಾರ್ಯಕ್ರಮವನ್ನು ಒಂದು ಹುನ್ನಾರವೆಂಬಂತೆ ನೋಡುವ ಹಾಗೂ ಆ ಕಾರಣದಿಂದ ಅದನ್ನು ತಿರಸ್ಕರಿಸುವ ಪ್ರಯತ್ನಗಳೂ ನೂರಾರು ವರ್ಷಗಳಿಂದ ನಡೆದಿವೆ. ಹುನ್ನಾರವೇಕೆಂದರೆ, ಜಾತಿ ವ್ಯವಸ್ಥೆಯ ಹಿಂದೂ ಸಮಾಜದೊಳಗೆ ದಲಿತರನ್ನು ಮತ್ತೆ ಸೇರಿಸಿ ಶೋಷಿಸುವ ಉದ್ದೇಶದಿಂದ ಸಂಪ್ರದಾಯಸ್ಥ ಹಿಂದೂಗಳು ಈ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ ಎಂಬ ಆರೋಪ. ಆದರೆ ಜಾತಿ ವ್ಯವಸ್ಥೆಯು ಹಿಂದೂ ಸಮಾಜದ ಲಕ್ಷಣವಾದರೆ, ಹಾಗೂ ದಲಿತರು ಹಿಂದೂ ಸಮಾಜದೊಳಗೆ ಇಲ್ಲ ಅಂತಾದರೆ ಅವರು ಇದುವರೆಗೆ ಜಾತಿ ವ್ಯವಸ್ಥೆಗೆ ಒಳಪಟ್ಟಿಲ್ಲ ಎಂದು ಇಂಗಿತವೆ? ಅಥವಾ ಜಾತಿವ್ಯವಸ್ಥೆಯ ಹೊರಗಿದ್ದೂ ಅವರನ್ನು ಸಾವಿರಾರು ವರ್ಷಗಳವರೆಗೆ ಶೋಷಿಸಲು ಹಿಂದೂಗಳಿಗೆ ಸಾಧ್ಯವಾಗಿದ್ದೇ ಹೌದಾದಲ್ಲಿ ಆ ಕೆಲಸವನ್ನೇ ಮಾಡಲು ಹಿಂದೂ ಸಮಾಜದೊಳಗೆ ಅವರನ್ನು ಹೊಸತಾಗಿ ಸೇರಿಸಿಕೊಳ್ಳುವ ಅಗತ್ಯವೇಕೆ? ಒಟ್ಟಿನಲ್ಲಿ ಇದು ಒಂದು ಒಗಟಾಗಿ ಬಿಡುತ್ತದೆ.

ಈ ಒಗಟು ಏಕೆ ಹುಟ್ಟುತ್ತದೆಯೆಂದರೆ ನಮ್ಮ ಸಂಸ್ಕೃತಿಯ ಇತಿಹಾಸವನ್ನು ಕಟ್ಟುವಾಗ ಪರಸ್ಪರ ಸುಸಂಬದ್ಧವಲ್ಲದ ಅನೇಕ ವಿವರಗಳನ್ನು ಒಟ್ಟಿಗೆ ತರಲಾಗಿದೆ. ಅವುಗಳಲ್ಲಿ ಒಂದು ಹಿಂದೂಯಿಸಂ ಎಂಬ ರಿಲಿಜನ್ನಿನ ಕಲ್ಪನೆ, ಮತ್ತೊಂದು ಆರ್ಯರ ಆಕ್ರಮಣದ ಕಥೆ. ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನಿದೆ, ಅದಕ್ಕೆ ಬ್ರಾಹ್ಮಣರು ಪುರೋಹಿತಶಾಹಿಗಳು, ಇದರಲ್ಲಿ ಮೂರ್ತಿಪೂಜೆ ಜಾತಿ ವ್ಯವಸ್ಥೆಗಳಂಥ ಅನಿಷ್ಟ ಆಚರಣೆಗಳಿವೆ ಎಂಬ ಕಥೆ ೧೯ನೆಯ ಶತಮಾನದಲ್ಲೇ ಗಟ್ಟಿಯಾಯಿತು. ಪಾಶ್ಚಾತ್ಯರು ಕ್ಯಾಥೋಲಿಕ್ ಚರ್ಚಿನಂತೇ ಇದೊಂದು ಭ್ರಷ್ಟವಾದ ರಿಲಿಜನ್ನು ಎಂದು ಭಾವಿಸಿದ್ದರು. ಆ ಸಂದರ್ಭದಲ್ಲಿ ಇನ್ನೂ ಕೆಲವು ಪಾಶ್ಚಾತ್ಯ ವಿದ್ವಾಂಸರು ಹಾಗೂ ದೇಶೀ ಸುಧಾರಣಾವಾದಿಗಳು ಹಿಂದೂಯಿಸಂ ಮೂಲತಃ ಉದಾತ್ತವಾದ ರಿಲಿಜನ್ನಾಗಿದೆ ಎಂಬ ನಿರೂಪಣೆಯನ್ನು ಗಟ್ಟಿಮಾಡತೊಡಗಿದರು. ಈ ನಿರೂಪಣೆಗೆ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಏಕದೇವತಾ ತತ್ವವೇ ಆಧಾರವಾಯಿತು. ವೇದಗಳು ಹಾಗೂ ಉಪನಿಷತ್ತುಗಳು ನಿರ್ಗುಣ ನಿರಾಕಾರನಾದ ಏಕದೇವತಾ ಆರಾಧನೆಯನ್ನು ಎತ್ತಿಹಿಡಿಯುತ್ತವೆ ಎಂಬುದಾಗಿ ಈ ವಿದ್ವಾಂಸರು ಪ್ರತಿಪಾದಿಸಿದರು. ಅಂದರೆ ಹಿಂದೂಯಿಸಂನ ಶುದ್ಧ ರೂಪವು ವೇದಾಂತದಲ್ಲಿ ಇದೆ ಎಂದಾಯಿತು.

ಹತ್ತೊಂಭತ್ತನೆಯ ಶತಮಾನದಲ್ಲಿ ಆರ್ಯರ ಆಕ್ರಮಣದ ಕಥೆಗಳೂ ಗಟ್ಟಿಯಾದವು. ಆರ್ಯರೆಂಬ ಜನಾಂಗವು ಪ್ರಾಚೀನ ಕಾಲದಲ್ಲೇ ಭಾರತಕ್ಕೆ ಹೊರಗಿನಿಂದ ಬಂದಿದೆ. ಅವರೂ ಐರೋಪ್ಯರೂ ಒಂದೇ ಮೂಲದವರು, ಅವರು ಸಂಸ್ಕೃತವನ್ನು ಮಾತನಾಡುತ್ತಿದ್ದರು. ವೇದಗಳು ಆರ್ಯರ ರಿಲಿಜನ್ನಿನ ಪವಿತ್ರ ಗ್ರಂಥಗಳು, ಆರ್ಯರೇ ಭಾರತಕ್ಕೆ ಏಕದೇವೋಪಾಸನೆಯಂಥ ಉನ್ನತ ರಿಲಿಜನ್ನನ್ನು ತಂದವರು, ವರ್ಣವ್ಯವಸ್ಥೆಯಂಥ ಉನ್ನತ ಸಮಾಜ ಕಲ್ಪನೆಯನ್ನು ರೂಢಿಸಿದವರು, ಇಲ್ಲಿನ ಮೂಲನಿವಾಸಿಗಳಿಗೆ ನಾಗರೀಕತೆಯನ್ನು ಕೊಟ್ಟವರು, ಇತ್ಯಾದಿ ಕಥೆಗಳು ಇತಿಹಾಸದ ರೂಪದಲ್ಲಿ ಪ್ರಚಲಿತದಲ್ಲಿ ಬಂದವು. ಈ ಆರ್ಯರ ರಿಲಿಜನ್ನು ನಂತರ ಬ್ರಾಹ್ಮಣ ಪುರೋಹಿತರಿಂದಾಗಿ ಭ್ರಷ್ಟಗೊಂಡು ಮೂರ್ತಿಪೂಜೆ, ಮೂಢಾಚಾರಗಳು ಬೆಳೆದು ಇಂದಿನ ಹಿಂದೂಯಿಸಂ ಅಸ್ತಿತ್ವಕ್ಕೆ ಬಂದಿದೆ ಎಂಬ ನಿರೂಪಣೆಯು ಜನಪ್ರಿಯವಾಯಿತು. ಒಟ್ಟಿನಲ್ಲಿ ಹಿಂದೂಯಿಸಂ ಎಂಬುದು ಆರ್ಯರಿಗೆ, ಬ್ರಾಹ್ಮಣರಿಗೆ ಹಾಗೂ ಸಂಸ್ಕೃತಕ್ಕೆ ಸಮೀಕರಣವಾಯಿತು. ಹತ್ತೊಂಭತ್ತನೆಯ ಶತಮಾನದ ಎಲ್ಲಾ ಧಾರ್ಮಿಕ ಸುಧಾರಣಾವಾದಿಗಳು ಈ ಕಥೆಯನ್ನು ನಂಬಿದ್ದರು. ಇತರ ವಿದ್ಯಾವಂತ ಬ್ರಾಹ್ಮಣರು ಹೆಮ್ಮೆಯಿಂದ ಈ ಕಥೆಯನ್ನು ಹೇಳಿಕೊಂಡು ತಿರುಗಿದರು.

ಆದರೆ ಈ ಕಥೆಗಳ ಜೊತೆಗೇ ಆರ್ಯಪೂರ್ವ ಮೂಲನಿವಾಸಿಗಳ ಹಾಗೂ ದ್ರಾವಿಡ ಜನಾಂಗದ ಕಲ್ಪನೆ ಕೂಡ ಮೊಳಕೆಯೊಡೆದು ಹೆಮ್ಮರವಾಯಿತು. ಅಂದರೆ ಆರ್ಯರು ಭಾರತಕ್ಕೆ ಬರುವ ಕಾಲದಲ್ಲಿ ಇಲ್ಲಿ ಮೂಲನಿವಾಸಿಗಳು ಇದ್ದರು, ಆರ್ಯರು ಮೂಲನಿವಾಸಿಗಳನ್ನು ಸೋಲಿಸಿ ಅವರನ್ನು ಜಾತಿವ್ಯವಸ್ಥೆಗೆ ಒಳಪಡಿಸಿದರು. ಆರ್ಯರ ಪುರೋಹಿತರಾದ ಬ್ರಾಹ್ಮಣರು ಈ ವ್ಯವಸ್ಥೆಯನ್ನು ರೂಪಿಸಿ ಕಾನೂನುಗಳನ್ನು ರಚಿಸಿದವರು. ಇಂಥ ಮೂಲನಿವಾಸಿಗಳಲ್ಲಿ ದ್ರಾವಿಡರು ಪ್ರಮುಖರು. ಅವರ ಭಾಷೆ ಹಾಗೂ ಜನಾಂಗ ಇಂದಿಗೂ ದಕ್ಷಿಣ ಭಾರತದಲ್ಲಿ ಉಳಿದುಕೊಂಡು ಬಂದಿದೆ ಎಂಬುವೆಲ್ಲ ಈ ದ್ರಾವಿಡ ಜನಾಂಗದ ಕಥೆಯ ವಿಭಿನ್ನ ಎಳೆಗಳಾಗಿವೆ.

೧೯ನೆಯ ಶತಮಾನದ ಮಧ್ಯಭಾಗದಲ್ಲಿ ಈ ಆರ್ಯ/ದ್ರಾವಿಡ ಜನಾಂಗಗಳ ಕಥೆಯನ್ನು ಆಧರಿಸಿ ಸಾಮಾಜಿಕ ಸಿದ್ಧಾಂತಗಳೂ, ಚಳವಳಿಗಳೂ, ಸಮುದಾಯಗಳ ಗುರುತುಗಳೂ ರೂಪುತಳೆದವು. ಜಾತಿ ವ್ಯವಸ್ಥೆಯ ಉಗಮದ ಕುರಿತು ಈ ಸಿದ್ಧಾಂತವೇ ಗಟ್ಟಿಯಾಯಿತು. ಅಂದರೆ ಆರ್ಯರ ವರ್ಣವ್ಯವಸ್ಥೆಯ ಮೂಲಕ ದಾಸ್ಯಕ್ಕೊಳಗಾದ ಮೂಲನಿವಾಸಿಗಳೇ ಶೂದ್ರರು ಎಂಬುದು. ವಸಾಹತುಕಾಲದ ಜನಗಣತಿಗಳಲ್ಲಿ ಇಲ್ಲಿನ ಸ್ಪೃಶ್ಯ ಜಾತಿಗಳನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇತ್ಯಾದಿಯಾಗಿ ನೋಂದಾಯಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಶೂದ್ರರೆಂಬುದಾಗಿ ಗುರುತನ್ನು ಪಡೆದವರು ಆರ್ಯರು ತಮ್ಮನ್ನು ಹಿಂದೂಯಿಸಂ ಹೆಸರಿನಲ್ಲಿ ದಾಸ್ಯಕ್ಕೊಳಪಡಿಸಿದ್ದಾರೆ. ಹಾಗಾಗಿ ಆದು ತಮ್ಮನ್ನು ಶೋಷಣೆ ಮಾಡುವ ರಿಲಿಜನ್ನು ಎಂಬುದಾಗಿ ಗ್ರಹಿಸಿದರು. ಹಿಂದೂಯಿಸಂನ ಸಂಸ್ಕೃತ ಗ್ರಂಥಗಳು ತಮ್ಮನ್ನು ದಾಸ್ಯಕ್ಕೊಳಪಡಿಸುವ ವರ್ಣ ವ್ಯವಸ್ಥೆಯನ್ನು ಪ್ರತಿಪಾದಿಸುತ್ತವೆ ಎಂದು ತಿಳಿದರು. ಆ ಕಾಲದಲ್ಲಿ ಶೂದ್ರ ಚಳವಳಿಯ ಹರಿಕಾರರಾದ ಫುಲೆಯವರ ಚಿಂತನೆಗಳಿಗೆ ಈ ನಿರೂಪಣೆಯೇ ಬುನಾದಿಯಾಗಿದೆ. ತದನಂತರ ಇಪ್ಪತ್ತನೆಯ ಶತಮಾನದಲ್ಲಿ ಕ್ರಮೇಣ ಅಸ್ಪೃಶ್ಯ ಜಾತಿಗಳು ವರ್ಣಸಮಾಜದಲ್ಲಿ ಒಳಗೊಳ್ಳದ, ಅಥವಾ ವರ್ಣಸಮಾಜದಿಂದ ಹೊರಹಾಕಿದ ಜಾತಿಗಳಾಗಿವೆ ಎಂಬ ನಿರೂಪಣೆ ಕೂಡ ಬೆಳೆಯಿತು. ಇಂಥ ಜಾತಿಗಳು ಈ ನೆಲದ ನಿಜವಾದ ಮೂಲನಿವಾಸಿಗಳಾಗಿದ್ದರು ಹಾಗೂ ಅವರು ಆರ್ಯ ಆಕ್ರಮಣದ ನಂತರ ಈ ಬಹಿಷ್ಕೃತ ಸ್ಥಿತಿಗೆ ಬಂದಿದ್ದಾರೆ ಎಂಬ ವಿವರಣೆಗಳು ಹುಟ್ಟಿಕೊಂಡವು. ಆದಿ ದ್ರಾವಿಡ, ಆದಿ ಕರ್ನಾಟಕ ಇತ್ಯಾದಿ ಹೆಸರುಗಳು ಉದಯಿಸಿದ್ದು ಹೀಗೆ. ಒಟ್ಟಿನಲ್ಲಿ ತಾವು ಆರ್ಯರಿಂದ ಹಾಗೂ ಅವರ ಹಿಂದೂ ಧರ್ಮದಿಂದ ಶೋಷಣೆಗೆ ಒಳಗಾಗಿರುವುದರಿಂದ ಈಗ ಹೀನಾಯ ಸ್ಥಿತಿಯಲ್ಲಿದ್ದೇವೆ ಎಂಬ ಐತಿಹಾಸಿಕ ವಿವರಣೆಯೇ ಸತ್ಯದ ಸ್ಥಾನವನ್ನು ಅಲಂಕರಿಸಿತು.

ಇದರ ಮುಂದಿನ ಹೆಜ್ಜೆಯಾಗಿ ಹಿಂದೂಯಿಸಂನ ಕರಾಳ ವ್ಯವಸ್ಥೆಯಿಂದ ವಿಮೋಚನೆಗಾಗಿ ಹೋರಾಡಿದ ದಲಿತ ಮುಂದಾಳುಗಳು ತಾವು ಹಿಂದೂಗಳಲ್ಲ ಎಂಬುದಾಗಿ ಭಾವಿಸತೊಡಗಿದರು. ಶೂದ್ರ ದ್ರಾವಿಡ ಮುಂದಾಳುಗಳು ಕೂಡ ಸಂಸ್ಕೃತ ಭಾಷೆಯಲ್ಲಿ ರಚಿತವಾದ ಇತಿಹಾಸ ಪುರಾಣಗಳ ನಾಯಕರು ಆರ್ಯ ಆಕ್ರಮಣಕಾರರು, ಅವರ ವೈರಿಗಳೇ ದ್ರಾವಿಡ ಮುಂದಾಳುಗಳು, ಇಂದಿನ ಬ್ರಾಹ್ಮಣರು ಆರ್ಯರ ಪ್ರತಿನಿಧಿಗಳು ಎಂಬ ಹೇಳಿಕೆಗಳನ್ನು ಭಾಷಣಗಳಲ್ಲಿ, ಬರೆಹಗಳಲ್ಲಿ ಸಾಮಾನ್ಯವಾಗಿ ನೀಡತೊಡಗಿದರು. ಬ್ರಾಹ್ಮಣರು, ಬ್ರಾಹ್ಮಣ ಆಚರಣೆಗಳು ಹಾಗೂ ಸಂಸ್ಕೃತ ಭಾಷೆ, ವೇದ ಪುರಾಣಾದಿಗಳು, ಇವೆಲ್ಲವೂ ಪರಕೀಯ ಜನಾಂಗವೊಂದಕ್ಕೆ ಸೇರಿವೆ. ಅವರು ಭಾರತಕ್ಕೆ ಬಂದು ಇಲ್ಲಿನ ಮೂಲನಿವಾಸಿಗಳನ್ನು ಜಾತಿ ವ್ಯವಸ್ಥೆಗೆ ಬಂಧಿಸಲು ಹಾಗೂ ಅಸ್ಪೃಶ್ಯರನ್ನಾಗಿ ಮಾಡಲು ಕಾರಣವಾಗಿವೆ ಎಂಬುದು ಈ ಎಲ್ಲಾ ಚಳವಳಿಗಳ ಸೈದ್ಧಾಂತಿಕ ತಳಹದಿ. ಇಂದಿನ ಸಾಮಾಜಿಕ ಹೋರಾಟಗಾರರು ಹಾಗೂ ಪ್ರಗತಿಪರರು ಈ ಇತಿಹಾಸವನ್ನು ಬಳುವಳಿಯಾಗಿ ಪಡೆದಿದ್ದಾರೆ.

ಆರ್ಯ ಹಾಗೂ ದ್ರಾವಿಡ ಜನಾಂಗೀಯ ಸಿದ್ಧಾಂತಗಳು ಇಲ್ಲದಿದ್ದರೆ ಈ ಮೇಲಿನ ಯಾವ ವಾದಗಳು ಹುಟ್ಟಲಿಕ್ಕೂ ಸಾಧ್ಯವಿಲ್ಲ, ತರ್ಕಬದ್ಧತೆಯನ್ನು ಗಳಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ ಎಂಬುದು ಈ ಮೇಲಿನ ಭಾಗದಲ್ಲಿ ಸ್ಪಷ್ಟವಾಗಿದೆ. ಆದರೆ ಇಂದು ಇತಿಹಾಸಕಾರರಾಗಲೀ, ಸಮಾಜ ಶಾಸ್ತ್ರಜ್ಞರಾಗಲೀ, ಆರ್ಯ/ದ್ರಾವಿಡ ಎಂಬವು ಭಾಷಾ ಗುಂಪುಗಳೇ ಹೊರತೂ ಜನಾಂಗಗಳಲ್ಲ ಎಂದು ತೀರ್ಮಾನಿಸಿದ್ದಾರೆ. ಮಾನವ ಶಾಸ್ತ್ರಜ್ಞರು ಜನಾಂಗ ಎಂಬ ಕಲ್ಪನೆಯೇ ಅವೈಜ್ಞಾನಿಕ ಎಂಬುದಾಗಿ ಮೂಲೆಗೆ ತಳ್ಳಿದ್ದಾರೆ. ಇನ್ನು ಹಿಂದೂಯಿಸಂ ಎಂಬುದೇ ಭಾರತದಲ್ಲಿ ಇಲ್ಲ ಎಂಬುದನ್ನೂ ವಿದ್ವಾಂಸರು ಮನಗಂಡಿದ್ದಾರೆ. ಅಂದರೆ ಈ ಮೇಲಿನ ನೂರಾರು ವರ್ಷಗಳ ಚರ್ಚೆಯು ಕೇವಲ ಗಾಳಿಯ ಗೋಪುರವೆಂಬುದು ಇಂದು ಅರಿವಾಗುತ್ತಿದೆ. ನಮ್ಮ ಸಾಮಾಜಿಕ ಕಳಕಳಿಗಳಿಗೆ ನಿಜದ ನೆಲೆ ತಪ್ಪಿಹೋಗಿದೆ. ನಿಜವಾದ ಸಮಸ್ಯೆಗಳ ಪರಿಹಾರವು ಮರೀಚಿಕೆಯಾಗಿದೆ. ಆದರೆ ಈ ತಪ್ಪು ನಿರೂಪಣೆಗಳು ಹಿಂದೂ ಎಂಬ ಪ್ರಭೇದದ ಕುರಿತು ನಕಾರಾತ್ಮಕಭಾವನೆಯನ್ನು ಬಿತ್ತುವ ಕೆಲಸವನ್ನು ಮಾತ್ರ ಯಶಸ್ವಿಯಾಗಿ ಮಾಡುತ್ತಿವೆ.

ಪ್ರೊ. ರಾಜಾರಾಮ ಹೆಗಡೆ

ಮೂಲತ: ಶಿರಸಿ ಸಮೀಪದ ಸಿದ್ದಾಪುರದ ಐನಕೈಯವರಾದ ಶ್ರೀಯುತರು, ಪೂನಾದ ಡೆಕ್ಕನ್ ಕಾಲೇಜಿನಲ್ಲಿ ಪ್ರಾಚೀನ ಭಾರತ ಚರಿತ್ರೆ, ಸಂಸ್ಕೃತಿ ಮತ್ತು ಪ್ರಾಕ್ತನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಪಿ.ಹೆಚ್.ಡಿ. (೧೯೭೯-೧೯೮೭) ಪದವಿಗಳನ್ನು ಪಡೆದವರು. ೧೯೮೮ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇರಿದರು. ವೃತ್ತಿ ಜೀವನದ ಆರಂಭದಲ್ಲಿ ಪ್ರಾಕ್ತನಶಾಸ್ತ್ರದಲ್ಲಿ ಹೆಚ್ಚು ಆಸಕ್ತರಾಗಿದ್ದ ಇವರು ಐ.ಸಿ.ಹೆಚ್.ಆರ್., ಯುರೋಪಿಯನ್ ಕಮಿಷನ್ ಮತ್ತು ಫೋರ್ಡ್ ಫೌಂಡೇಷನ್‌ಗಳ ಧನ ಸಹಾಯದೊಂದಿಗೆ ಆ ವಿಷಯದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. ಕೆಲವು ಕಾಲಾನಂತರ ಪ್ರಾಕ್ತನಶಾಸ್ತ್ರದಿಂದ ತಮ್ಮ ಅಧ್ಯಯನದ ಗಮನವನ್ನು ಮಧ್ಯಕಾಲೀನ ಕರ್ನಾಟಕ ಚರಿತ್ರೆಯ ಕಡೆಗೆ ಹರಿಸಿದರು. ಅಲ್ಲಿ ಅವರು ನಡೆಸಿದ ಅಧ್ಯಯನದ ಪರಿಣಾಮವಾಗಿ ಭಾರತೀಯ ಇತಿಹಾಸ, ಸಮಾಜ, ಸಂಸ್ಕೃತಿಗಳ ಕುರಿತ ವಸಾಹತು ಸಂಕಥನಗಳ ಬಗ್ಗೆ ಆಸಕ್ತರಾದರು. ಇದೇ ಸಂದರ್ಭದಲ್ಲಿ ಎಸ್.ಎನ್. ಬಾಲಗಂಗಾಧರರ ಸಂಪರ್ಕಕ್ಕೆ ಬಂದ ಶ್ರೀಯುತರು, ಭಾರತೀಯ ನಿರೂಪಣೆಗಳ ಕುರಿತು ಆಳವಾದ ಅಧ್ಯಯನ ಮಾಡಿದರು. ಶ್ರೀಯುತರು "The Heathen in his Blindness: Asia, the West and the Dynamic of Religion" ಅನ್ನು ಕನ್ನಡಕ್ಕೆ "ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ" ಎಂಬ ಶೀಷಿಕೆಯಡಿಯಲ್ಲಿ ಅನುವಾದಿಸಿದರು. ಇದಲ್ಲದೆ ಇವರು ‘ಬೌದ್ಧಿಕ ದಾಸ್ಯದಲ್ಲಿ ಭಾರತ’, ‘ಬುದ್ಧಿಜೀವಿಗಳ ಮೂಢನಂಬಿಕೆಗಳು’, ‘ದಾರಿ ತಪ್ಪಿದ ಸಂಸ್ಕೃತಿ ಚಿಂತನೆ‘, ‘ಪಶ್ಚಿಮಾಯನ’ ಮೊದಲ ಮಹತ್ತ್ವಪೂರ್ಣಕೃತಿಗಳನ್ನು ರಚಿಸಿದ್ದಾರೆ.

Subscribe For Newsletter

    About Us

    The Samhati Foundation established the Foundation for the Study of Indian Culture (FSIC: https://fsic.in/) a research division dedicated to the scientific study of Indian culture and traditions..

    Email Us: director@fsic.in

    Samhati  @2026. All Rights Reserved.

    Discover more from Samhati

    Subscribe now to keep reading and get access to the full archive.

    Continue reading